ಶಿರಸಿ ಗಣೇಶ ನಗರ ರಸ್ತೆ ನಿರ್ಮಾಣ ಜವಾಬ್ದಾರಿಪಡೆದ ಗುತ್ತಿಗೆದಾರ ಹನುಮಂತ ನಾಯ್ಕ ಅವರು ಕಾಣೆಯಾಗಿದ್ದಾರೆ. ಹೀಗಾಗಿ ಅಲ್ಲಿನ ಕೆಲಸ ಅರೆಬರೆಯಾಗಿದ್ದು, ಜನ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ.
ಶಿರಸಿ ಗಣೇಶ ನಗರ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆ ತುಂಬ ಧೂಳು ತುಂಬಿದ್ದು ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ನಗರೋತ್ಥಾನ ಯೋಜನೆಯ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದೆ. ಮೊದಲಿದ್ದ ರಸ್ತೆಯನ್ನು ಕಿತ್ತು ಹಾಕಿದ ಗುತ್ತಿಗೆದಾರ ಸರಿಯಾದ ರಸ್ತೆ ನಿರ್ಮಿಸದೇ ಪರಾರಿಯಾಗಿದ್ದಾರೆ. ಇದರಿಂದ ನಿತ್ಯ ಓಡಾಡುವವರ ಜೊತೆ ವಾಹನ ಸವಾರರು ಪರದಾಡುತ್ತಿದ್ದಾರೆ.
ಅಪೂರ್ಣ ಕಾಮಗಾರಿಯಿಂದ ಎಲ್ಲಡೆ ಧೂಳು ಹೆಚ್ಚಾಗಿದೆ. ಪರಿಣಾಮ ಸುತ್ತಲಿನ ಜನ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಕಾಮಗಾರಿ ಹಿನ್ನಲೆ ಕುಡಿಯುವ ನೀರಿನ ಪೈಪ್ ಲೈನುಗಳನ್ನು ತುಂಡರಿಸಿದ್ದು ಮತ್ತೊಂದು ಸಮಸ್ಯೆ ಸೃಷ್ಠಿಸಿದೆ. ಈ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನಡೆದಿದ್ದು, ರಸ್ತೆ ಲೋಕಾರ್ಪಣೆ ಮುಹೂರ್ತಕ್ಕಾಗಿ ಜನ ಕಾಯುತ್ತಿದ್ದಾರೆ. `ಗುಣಮಟ್ಟದ ಕಾಮಗಾರಿ ನಡೆಸಿ’ ಎಂದು ಗುದ್ದಲಿ ಪೂಜೆಯ ವೇಳೆ ಶಾಸಕ ಭೀಮಣ್ಣ ನಾಯ್ಕ ಅವರು ಸೂಚನೆ ನೀಡಿದ್ದು, ಕಾಮಗಾರಿ ಗುಣಮಟ್ಟವನ್ನು ನಂತರ ಪರಿಶೀಲಿಸಿದವರಿಲ್ಲ.
ಗಣೇಶನಗರ ರಸ್ತೆಯನ್ನು ಅಗೆದು ಗುತ್ತಿಗೆದಾರ ನಾಪತ್ತೆಯಾಗಿದ್ದು, ರಸ್ತೆಯಲ್ಲಿ ಓಡಾಡಲು ತೀವ್ರ ತೊಂದರೆ ಅನುಭವಿಸುತ್ತಿರುವ ಸ್ಥಿತಿ ಖಂಡಿಸಿ ಸ್ಥಳೀಯರು ನಗರಸಭೆಗೆ ಮುತ್ತಿಗೆ ಹಾಕಿದ್ದಾರೆ. `ಎರಡು ತಿಂಗಳ ಹಿಂದೆ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ನಂತರ ರಸ್ತೆಯನ್ನು ಅಗೆದಾಗ ಕುಡಿಯುವ ನೀರಿನ ನಳ ಸಂಪರ್ಕದ ಪೈಪ್‌ಗಳು ತುಂಡಾಗಿದ್ದು ಅದನ್ನು ಸರಿ ಮಾಡಿಲ್ಲ. ಸ್ಥಳಕ್ಕೆ ಜೆಲ್ಲಿಕಲ್ಲು, ಕ್ರಷರ್ ಫೌಡರ್ ಹಾಕಿ ಗುತ್ತಿಗೆದಾರ ಕೆಲಸ ಸ್ಥಗಿತಗೊಳಿಸಿದರೂ ಕೇಳುವವರಿಲ್ಲ’ ಎಂದು ಅಲ್ಲಿದ್ದವರು ಆಕ್ರೋಶವ್ಯಕ್ತಪಡಿಸಿದರು.
`ದಾವಣಗೆರೆಯ ಗುತ್ತಿಗೆದಾರ ಹನುಮಂತ ನಾಯ್ಕ ರಸ್ತೆ ಅಗೆದು ಓಡಿ ಹೋಗಿದ್ದಾರೆ. ಶೀಘ್ರದಲ್ಲಿ ರಸ್ತೆ ಆರಂಭಗೊಳಿಸದಿದ್ದರೆ ಸಾಮೂಹಿಕವಾಗಿ ಎಲ್ಲರೂ ಬೀದಿಗೆ ಬಂದು ರಸ್ತೆಯನ್ನು ಅಗೆದು ಹಾಕಲು ನಿರ್ಧರಿಸಿದ್ದೇವೆ’ ಎಂದು ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ ನಾಯ್ಕ ಆಕ್ರೋಶವ್ಯಕ್ತಪಡಿಸಿದ್ದಾರೆ. `ಒಂದುವರೆ ತಿಂಗಳಿನಿAದ ರಸ್ತೆಯ ಸ್ಥಿತಿಯನ್ನು ಸಹಿಸಿಕೊಂಡಿದ್ದೇವೆ. ಅಗೆದ ರಸ್ತೆಯಲ್ಲಿ ತಿರುಗಾಡಲು ತೀವ್ರ ತೊಂದರೆಯಾಗುತ್ತಿದೆ. ಗುತ್ತಿಗೆದಾರನನ್ನು ಯಂತ್ರಗಳು ಹಾಳಾಗಿವೆ ಎನ್ನುತ್ತಾರೆ’ ಎಂದು ಸ್ಥಳೀಯ ಮುಖಂಡ ಅನಂತ ನಾಯ್ಕ ವಿವರಿಸಿದರು.
ಗಣೇಶ ನಗರ ರಸ್ತೆ ಕುರಿತು ಮಾತನಾಡಿದ ನಗರಸಭೆ ಪೌರಾಯಕ್ತ ಪ್ರಕಾಶ ಚೆನ್ನಪ್ಪನವರ್ `ರಸ್ತೆ ಕಾಮಗಾರಿ ಆದಷ್ಟು ಶೀಘ್ರ ಪ್ರಾರಂಭಿಸುವAತೆ ಸೂಚನೆ ನೀಡುತ್ತಿದ್ದೇವೆ. ಗುತ್ತಿಗೆದಾರ ಕೆಲ ಬಾರಿ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಗುತ್ತಿಗೆದಾರನ ನಿರ್ಲಕ್ಷ್ಯದ ಕುರಿತು ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ’ ಎಂದರು. ಅದಾದ ನಂತರ ಜನ ಪ್ರತಿಭಟನೆ ಮುಗಿಸಿದರು. ಪ್ರಮುಖರಾದ ನಾಗರಾಜ ಶೆಟ್ಟಿ, ಗಣೇಶ ಆಚಾರಿ, ಸಂಕೇತ ಶೆಟ್ಟಿ, ನಾಗೇಶ ಗೋಸಾವಿ, ಕೃಷ್ಣ ಶೆಟ್ಟಿ, ಆಟೋ ಬಾಳಾ, ಕೃಷ್ಣ ಗಾಂವಕರ, ಉಮೇಶ ನಾಯ್ಕ, ಅವಿನಾಶ ನಾಯ್ಕ, ಅಭಿಷೇಕ ದೇವಾಡಿಗ ಪ್ರತಿಭಟನೆಯಲ್ಲಿದ್ದರು.