`ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸ್ವಚ್ಚತೆಯ ಪ್ರಾಮುಖ್ಯತೆ ಅತಿ ಮುಖ್ಯ’ ಎಂದು ಶಿರಸಿ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಅವರು ಹೇಳಿದ್ದಾರೆ.
ದಾಸನಕೊಪ್ಪದಲ್ಲಿರುವ ಮಲೆನಾಡು ಪ್ರೌಢಶಾಲೆಯ ಆವಾರದಲ್ಲಿ ನಾರಾಯಣ ಹೃದಯಾಲಯದವರ ಸಿ ಎಸ್ ಆರ್ ಅನುದಾನದ ಅಡಿ ಸ್ಕೋಡ್‌ವೆಸ್ ಸಂಸ್ಥೆಯವರು ಶೌಚಾಲಯ ನಿರ್ಮಿಸಿದ್ದು, ಭೀಮಣ್ಣ ನಾಯ್ಕ ಅವರು ಆ ಶೌಚಾಲಯವನ್ನು ಮಕ್ಕಳ ಬಳಕೆಗೆ ಒಪ್ಪಿಸಿದರು. ಈ ವೇಳೆ ಮಾತನಾಡಿದ ಅವರು `ಶೌಚಾಲಯಗಳು ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ’ ಎಂದರು.
`ಈಗಲೂ ಗ್ರಾಮೀಣ ಪ್ರದೇಶದ ಹಲವಾರು ಮಕ್ಕಳಲ್ಲಿ ಶೌಚ ಪ್ರಕ್ರಿಯೆಗಳ ಕುರಿತು ಮುಕ್ತವಾಗಿ ಮಾತನಾಡುವ ವಾತಾವರಣವಿಲ್ಲದೇ ಇರುವುದರಿಂದ ಸಕಾಲದಲ್ಲಿ ಶೌಚಾಲಯಗಳನ್ನು ಬಳಸದೇ ದೈಹಿಕ ಹಿಂಸೆ, ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ತರಗತಿಗಳಲ್ಲಿ ಕ್ರೀಯಾಶೀಲರಾಗಿ ಭಾಗವಹಿಸಲು ಸಾಧ್ಯವಾಗದೇ ಉತ್ತಮ ಅಂಕಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಅದನ್ನು ಅರಿತು ಇಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ವಿದ್ಯಾರ್ಥಿಗಳು ಶೌಚಾಲಯಗಳನ್ನು ಸಮರ್ಪಕವಾಗಿ ಬಳಸಬೇಕು’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ನಾರಾಯಣ ಹೃದಯಾಲಯದ ಸಿ ಎಸ್ ಆರ್ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಮುತ್ತುರಾಜ ಮಾತನಾಡಿ, `ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿನ ವೈದ್ಯರ ಕೊರತೆಯನ್ನು ನೀಗಿಸಲು ನಾರಾಯಣ ಹೃದಯಾಲಯದ ಡಾ ದೇವಿಪ್ರಸಾದ ಶೆಟ್ಟಿಯವರ ಆಶಯದಂತೆ ಸ್ಥಳೀಯ ವಿದ್ಯಾರ್ಥಿಗಳ ಕೌಶಲ್ಯವನ್ನಾಧರಿಸಿ ವೈದ್ಯಕೀಯ ಶಿಕ್ಷಣಕ್ಕೆ ಸಹಾಯ ಮಾಡುವುದರೊಂದಿಗೆ ಗ್ರಾಮೀಣ ವೈದ್ಯರ ಕೊರತೆಯನ್ನು ನೀಗಿಸಲು ಶ್ರಮಿಸಲಾಗುತ್ತಿದೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಮಾತನಾಡಿ `ಋತುಚಕ್ರದ ಸಮಯದಲ್ಲಿ ಸಮರ್ಪಕ ಶೌಚಾಲಯಗಳಿಲ್ಲದೇ ತರಗತಿಗೆ ಗೈರು ಆಗುತ್ತಿರುವ ಅಂಶವು ಸಂಸ್ಥೆಯ ಗಮನಕ್ಕೆ ಬಂದಿರುವುದರಿAದ ಗ್ರಾಮೀಣ ವಿದ್ಯಾರ್ಥಿನಿಯರ ಋತುಚಕ್ರದ ಸಂದರ್ಭದಲ್ಲೂ ಅನುಕೂಲವಾಗುವಂತಹ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಶೌಚದ ನಂತರದಲ್ಲಿ ಅನುಸರಿಸಬೇಕಾದ ಸ್ವಚ್ಛತೆಯ ಬಗ್ಗೆಯೂ ಕೂಡ ತರಬೇತಿ ನೀಡಲಾಗುತ್ತಿದೆ’ ಎಂದರು.
ವೇದಿಕೆಯಲ್ಲಿ ಶಿವಮೊಗ್ಗ ನಾರಾಯಣ ಹಾಸ್ಪಿಟಲ್‌ನ ಸೀನಿಯರ್ ಮ್ಯಾನೇಜರ್ ಶೈಲೇಶ್ ಎಸ್ ಎನ್, ಬದನಗೋಡ ಗ್ರಾಮ ಪಂಚಾಯಿತಿಯ ಅಧ್ಯಕ್ಷ ನಟರಾಜ್ ಹೊಸೂರ್, ಉಪಾಧ್ಯಕ್ಷೆ ಅಕ್ಕಮಹಾದೇವಿ ಆಲೂರು, ಮಲೆನಾಡು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶೈಲೇಶ್ ಕೊಯಿನ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲೆನಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಬಿ ಕೆ ಅವರು ಸ್ವಾಗತಿಸಿದರು. ಮಲೆನಾಡು ಪ್ರೌಢಶಾಲೆಯ ದೈಹಿಕ ಶಿಕ್ಷಕ ದಯಾನಂದ ವಂದಿಸಿದರು. ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ವಿರೇಂದ್ರ ಸಿ ಜೊತೆ ಸಿಬ್ಬಂದಿ ಕಾರ್ಯಕ್ರಮ ಸಂಘಟಿಸಿದ್ದರು.