ಕಾರವಾರದ ಅರಗಾ ನೇವಲ್ ಬೇಸಿನಲ್ಲಿ ಕೆಲಸ ಮಾಡುವ ಕೇಂದ್ರ ಸರ್ಕಾರಿ ಉದ್ಯೋಗಿ ಗುರುರಾಜ ಕಲ್ಲೋಳ್ಳಿ ಅವರಿಗೆ ಜೀವ ಬೆದರಿಕೆ ಬಂದಿದೆ. ಅಲ್ಲಿಯೇ ಕೆಲಸ ಮಾಡುವ ಕಾರ್ಮಿಕ ಮುಖಂಡ ದೀಪಕ ತಾಂಡೇಲ್ ಅವರು ಬೆದರಿಕೆ ಒಡ್ಡಿದ್ದಾರೆ.
ಕಾರವಾರದ ಬಸ್ ಡಿಪೋ ಬಳಿಯ ಪಾರಿಜಾತ ಅಪಾರ್ಟಮೆಂಟಿನಲ್ಲಿ ಗುರುರಾಜ್ ಶ್ರೀಶೈಲ್ ಕಲ್ಲೋಳ್ಳಿ ಅವರು ವಾಸವಾಗಿದ್ದಾರೆ. ಭಾರತೀಯ ನೌಕಾನೆಲೆಯ ನೇವಲ್ ಬೇಸ್ ಒಳಗೆ ಅವರು ಕರ್ತವ್ಯದಲ್ಲಿದ್ದಾರೆ. ಅಂಕೋಲಾದ ಹಾರವಾಡ ಸೀಬರ್ಡ ಕಾಲೋನಿಯ ದೀಪಕ ತಾಂಡೇಲ್ ಅವರು ಸೂಚಿಸಿದ ಕೆಲಸವೊಂದನ್ನು ಮಾಡದ ಕಾರಣ ಗುರುರಾಜ ಕಲ್ಲೋಳ್ಳಿ ಅವರಿಗೆ ಬೆದರಿಕೆ ಬಂದಿದೆ. ದೀಪಕ ತಾಂಡೇಲ್ ಅವರು ಗುರುರಾಜ ಕಲ್ಲೋಳ್ಳಿ ಅವರು ಯುನಿಪಾರಂ ಧರಿಸಿರುವಾಗಲೇ ಅವರ ಕಾಲರ್ ಪಟ್ಟಿ ಹಿಡಿದು ದಬಾಯಿಸಿದ್ದಾರೆ.
ಯೂನಿಯನ್ ಪ್ರಮುಖರಾಗಿರುವ ದೀಪಕ ತಾಂಡೇಲ್ ಅವರು ಕಾರ್ಮಿಕರಿಗೆ ಬೈದ ಕಾರಣ ಕಾರ್ಮಿಕರು ಮುನಿಸಿಕೊಂಡಿದ್ದಾರೆ. ಹೀಗಿರುವಾಗ ಡಿಸೆಂಬರ್ 24ರಂದು ನೇವಲ್ ಬೇಸಿನ ಶಿಫ್ ರಿಪೇರ್ ಯಾರ್ಡಿನಲ್ಲಿ ಗುರುರಾಜ ಕಲ್ಲೋಳ್ಳಿ ಅವರು ಕೆಲಸ ಮಾಡುತ್ತಿದ್ದು, ಪಿ 6ನಲ್ಲಿ ನಡೆಯುವ ಪೋರೋಪ್ಲಿಪ್ಟ್ ಕೆಲಸ ಬಂದ್ ಮಾಡುವಂತೆ ದೀಪಕ ತಾಂಡೇಲ್ ಅವರು ಸೂಚಿಸಿದ್ದಾರೆ. ಆ ವೇಳೆ ಗುರುರಾಜ ಕಲ್ಲೋಳ್ಳಿ ಅವರು `ಮೇಲಧಿಕಾರಿಯಿಂದ ಸೂಚನೆ ಬಂದರೆ ಮಾತ್ರ ಬಂದ್ ಮಾಡುವೆ’ ಎಂದಿದ್ದಾರೆ. ಈ ವಿಷಯವನ್ನು ಗುರುರಾಜ ಕಲ್ಲೋಳ್ಳಿ ಅವರು ಮೇಲಧಿಕಾರಿಗಳ ಗಮನಕ್ಕೂ ತಂದಿದ್ದು, ಇದರಿಂದ ದೀಪಕ ತಾಂಡೇಲ್ ಸಿಟ್ಟಾಗಿದ್ದಾರೆ.
ಅದಾದ ನಂತರ ದೀಪಕ ತಾಂಡೇಲ್ ಅವರು ನೇವಲ್ ಬೇಸ್ ಯಸ್ ಅಪಾರ್ಟಮೆಂಟಿಗೆ ನುಗ್ಗಿ ಅಲ್ಲಿದ್ದ ಗುರುರಾಜ ಕಲ್ಲೋಳ್ಳಿ ಕಲ್ಲೋಳ್ಳಿ ಅವರ ಕೊರಳಪಟ್ಟಿ ಹಿಡಿದಿದ್ದಾರೆ. `ಹೊರಗಡೆ ಸಿಗು, ನಿನ್ನ ಹಾಗೂ ನಿನ್ನ ಕುಟುಂಬವನ್ನು ನೋಡಿಕೊಳ್ಳುವೆ’ ಎಂದು ಬೆದರಿಸಿದ್ದಾರೆ. ಆ ಬೆದರಿಕೆಯಿಂದ ಕಂಗಾಲಾದ ಗುರುರಾಜ ಕಲ್ಲೋಳ್ಳಿ ಅವರು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ದೂರಿದ್ದಾರೆ.