ರಫೀಕ್ ಕ್ರೌರ್ಯಕ್ಕೆ ಬಲಿಯಾದ ಯಲ್ಲಾಪುರದ ರಂಜಿತಾ ಕುಟುಂಬದವರನ್ನು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಭೇಟಿಯಾಗಿದ್ದಾರೆ. `ದುಃಖದಲ್ಲಿರುವ ಕುಟುಂಬಕ್ಕೆ ಹಿಂದು ಸಂಘಟನೆಗಳು ಸದಾ ಬೆಂಬಲವಾಗಿ ನಿಲ್ಲುತ್ತದೆ’ ಎಂದವರು ಧೈರ್ಯ ಹೇಳಿದ್ದಾರೆ. ಅದಾದ ನಂತರ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಮೋದ ಮುತಾಲಿಕ್ ಕಿಡಿಕಾರಿದ್ದಾರೆ.
`ಕಾಂಗ್ರೆಸ್ ಸರ್ಕಾರ ಮತಕ್ಕಾಗಿ ಜಿಹಾದಿಗಳನ್ನು, ಕೊಲೆಗಡುಕರನ್ನು, ಗೋ ಹಂತಕರ ಓಲೈಕೆ ಮಾಡುತ್ತಿದೆ. ಅವರಿಗೆ ನಾಚಿಕೆ, ಮಾನ, ಮರ್ಯಾದೆ, ದೇಶಭಕ್ತಿ ಯಾವುದೂ ಇಲ್ಲ. ಅಮಾನವೀಯತೆಯೇ ಕಾಂಗ್ರೆಸಿನಲ್ಲಿರುವ ಹಿಂದುಗಳನ್ನೂ ನುಂಗಿ ಹಾಕಲಿದೆ’ ಎಂದರು. `ಸರ್ಕಾರ, ಪೊಲೀಸ್ ಇಲಾಖೆ, ನ್ಯಾಯಾಲಯ ಹೇಗೆ ಬೇಕಾದರೂ ನಡೆದುಕೊಳ್ಳುತ್ತದೆ ಎನ್ನುವುದಕ್ಕೆ ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣವೇ ಸಾಕ್ಷಿ. ಅಮಾನವೀಯವಾಗಿ ಆಕೆಯನ್ನು ಕೊಚ್ಚಿ ಕೊಂದಿರುವ ಪ್ರಕರಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದು ಯಾವ ರೀತಿಯ ನ್ಯಾಯ ವ್ಯವಸ್ಥೆ?’ ಎಂದು ಪ್ರಶ್ನಿಸಿದರು.
`ಯಲ್ಲಾಪುರದ ರಂಜಿತಾರನ್ನು ಹಲಾಲ್ ಮಾದರಿಯಲ್ಲಿ ಕತ್ತರಿಸಿ ಹಾಕಿರುವುದು ಖಂಡನೀಯ. ಕೊಲೆ ಮಾಡಿದ ವ್ಯಕ್ತಿ ಸತ್ತರೂ, ಕೊಲೆ, ಗೋಹತ್ಯೆ, ಲವ್ ಜಿಹಾದ್ ನಂತಹ ಕೃತ್ಯ ಮಾಡುವ ಮಾನಸಿಕತೆ ಸಾಯುವುದಿಲ್ಲ. ಈ ಪ್ರವೃತ್ತಿಯನ್ನು ತಡೆಯುವ ಬಗ್ಗೆ ಸರ್ಕಾರ, ರಾಜಕಾರಣಿಗಳು, ಸಮಾಜ ಚಿಂತನೆ ಮಾಡಬೇಕಾಗಿದೆ. ಈ ವಿಚಾರದಲ್ಲಿ ಹಿಂದು ಸಂಘಟನೆಗಳು ಒಗ್ಗೂಡಿ ಬೀದಿಗಿಳಿದು ಹೋರಾಟ ಮಾಡಲಿವೆ’ ಎಂದು ಘೋಷಿಸಿದರು. `ಬಳ್ಳಾರಿಯಲ್ಲಿ ಹತ್ಯೆಯಾದ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ತಕ್ಷಣ ಹೋಗಿ 25 ಲಕ್ಷ ರೂ ಪರಿಹಾರ ನೀಡಲಾಗಿದೆ. ಯಲ್ಲಾಪುರದಲ್ಲಿ ದಲಿತ ಮಹಿಳೆಯ ಕೊಲೆಯಾದರೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ’ ಎಂದು ಕಿಡಿಕಾರಿದರು.
`ಹೆಣದ ಮೇಲೆ ರಾಜಕೀಯ ಮಾಡಬೇಡಿ ಎಂದು ಕ್ಷೇತ್ರದ ಶಾಸಕರು ಹೇಳುತ್ತಾರೆ. ಅವರಿಗೆ ನಿಜವಾಗಿ ದಲಿತರ ಮೇಲೆ ಕಾಳಜಿ ಇದ್ದರೆ ಮೃತ ಮಹಿಳೆಯ ಕುಟುಂಬಕ್ಕೆ 2 ಎಕರೆ ಕೃಷಿ ಭೂಮಿ, 50 ಲಕ್ಷ ರೂ ಪರಿಹಾರ ಕೊಡಿಸಲಿ’ ಎಂದು ಆಗ್ರಹಿಸಿದರು. `ದಲಿತರನ್ನು ರಾಜಕಾರಣಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದ ದಲಿತರೆಲ್ಲ ಮುಂದಿನ ಚುನಾವಣೆಯಲ್ಲಿ ಒಂದು ಮತವನ್ನೂ ಕಾಂಗ್ರೆಸಿಗೆ ಹಾಕದೇ ತಕ್ಕ ಬುದ್ದಿ ಕಲಿಸಬೇಕು’ ಎಂದು ಹೇಳಿದರು. ಕರ್ನಾಟಕ ಉತ್ತರ ರಾಜ್ಯದ ಗೌರವಾಧ್ಯಕ್ಷ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ, ಜಿಲ್ಲಾಧ್ಯಕ್ಷ ಮಂಜುನಾಥ ಕೆ. ಎಚ್, ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮಹಾಲಿಂಗ ಐಗಳಿ, ಧಾರವಾಡ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕಾಟ್ಕರ್, ಹರೀಶ ಪೂಜಾರಿ, ಸೋಮೇಶ್ವರ ನಾಯ್ಕ, ಶ್ರೀಪಾದ ಭಟ್ಟ, ಬಾಬು ಬಾಂದೇಕರ್, ಸಿದ್ದಾರ್ಥ ನಂದೊಳ್ಳಿಮಠ, ಕಿರಣ ಚೌಹಾಣ ಇತರರಿದ್ದರು.