`ಜೀವ ವೈವಿಧ್ಯಮಯಕ್ಕೆ ಮಾರಕವಾಗಿರುವ ಅಘನಾಶಿನಿ ನದಿ ನೀರು ಎತ್ತುವ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು’ ಎಂದು ಶಿರಸಿಯ ನ್ಯಾಯವಾದಿ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.
`ಅಘನಾಶಿನಿ ನದಿ ನೀರು ಎತ್ತುವಿಕೆ ಯೋಜನೆಯಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರ ಗಿಡ ನಾಶಗೊಳ್ಳಲಿದೆ. ಆರು ನೂರು ಎಕರೆ ಅಘನಾಶಿನಿ ಕಣಿವೆಯ ಮೌಲ್ಯಯುತ ಜೀವ ವೈವಿಧ್ಯಕ್ಕೆ ಹಾನಿ ಉಂಟಾಗಲಿದೆ. ಪಶ್ಚಿಮ ಘಟ್ಟ ಪ್ರದೇಶದ ಜನ ಜೀವನ, ಪ್ರಾಣಿ, ಪಕ್ಷಿಗಳ ಹಾಗೂ ಅತ್ಯಮೂಲ್ಯ ಗಿಡ ಸಸ್ಯಗಳ ಮೇಲೆ ದುಷ್ಪರಿಣಾಮ ಬೀಳಲಿದೆ. ಇದರಿಂದ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗಲಿದೆ’ ಎಂದವರು ವಿವರಿಸಿದ್ದಾರೆ.
`20 ಸಾವಿರ ಕೋಟಿ ವೆಚ್ಚದಲ್ಲಿ 35 ಟಿ ಎಂ ಸಿ ನೀರನ್ನು ಅಘನಾಶಿನಿಯಿಂದ ವಾಣಿವಿಲಾಸ ಜಲಾಶಯಕ್ಕೆ ಸಿದ್ದಾಪುರ ಮತ್ತು ಸಾಗರ ಮೂಲಕ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಮುಂತಾದ ಜಿಲ್ಲೆಗಳ ಮೂಲಕ ಸಾಗಿಸುವ ಯೋಜನೆ ಸರ್ಕಾರದ ಮುಂದಿದೆ. ಪೈಪ್ ಲೈನ್ ಕಾಲುವೆ ಮೂಲಕ ನೀರು ಒಯ್ಯುವ ಯೋಜನೆಯಿಂದ ಅಘನಾಶಿನಿಯ ಪರಿಸರದಲ್ಲಿ ನೀರಿನ ಸಂಕಟಕ್ಕೆ ಕಾರಣವಾಗಲಿದೆ. `ಸಮುದ್ರದಲ್ಲಿನ ಉಪ್ಪು ನೀರು ಕರಾವಳಿ ಭಾಗದ ಕೃಷಿ ಚಟುವಟಿಕೆ ಮತ್ತು ಸಾಗುವಳಿ ಕ್ಷೇತ್ರಕ್ಕೆ ಆತಂಕ ಉಂಟಾಗಲಿದೆ’ ಎಂದವರು ವಿಶ್ಲೇಷಿಸಿದ್ದಾರೆ.
`ಮಳೆಗಾಲದಲ್ಲಿ ಅಘನಾಶಿನಿಯ ಪರಿಸರದಲ್ಲಿ ಸುಮಾರು 600 ಚದರ ಕಿಮೀ ವಿಸ್ತೀರ್ಣದಲ್ಲಿ 2864ಮಿಮೀ ಸರಾಸರಿ ಮಳೆ ಆಗುತ್ತದೆ. ಅದರಂತೆ ಶಿರಸಿಯ ಅಘನಾಶಿನಿ ಉಗಮ ಸ್ಥಾನದಲ್ಲಿ 2500ಮಿಮೀ ಮಳೆ ಆಗುತ್ತದೆ. ಎಂಬತ್ತೊAದು ಟಿಎಂಸಿ ನೀರು ಸಮುದ್ರಕ್ಕೆ ಸೇರಲಿದ್ದು, ಉಂಚಳ್ಳಿ ಜಲಪಾತದ ಬಳಿ ಹರಿಯುವ ನೀರಿನ ಪ್ರಮಾಣ ಕೇವಲ 45 ಟಿಎಂಸಿ ಆಗಿದೆ. ಇದರಲ್ಲಿ 35 ಟಿಎಂಸಿ ನೀರು ಎತ್ತುವಿಕೆಗೆ ಕಾರ್ಯ ಸಾಧುವಲ್ಲ’ ಎಂದವರು ವೈಜ್ಞಾನಿಕ ಕಾರಣಗಳನ್ನು ನೀಡಿದ್ದಾರೆ.