`ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರಯುವ ಸಂದರ್ಭದಲ್ಲಿ ಪ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಆದ್ಯತೆ ಕೊಡಬೇಕು’ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚನೆ ನೀಡಿದ್ದಾರೆ.
`ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿನ ಪಡಿತರ ಚೀಟಿಗಳ ಸಂಖ್ಯೆಯಲ್ಲಿ ಪರಿಶೀಲಿಸಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರಯುವ ಕುರಿತಂತೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪ ಜಾತಿ ಪಂಗಡದ ಸಮುದಾಯದ ಶೇ 40ಕ್ಕಿಂತಲೂ ಹೆಚ್ಚಿನ ಜನ ವಾಸವಿರುವ ಕಡೆಗಳಲ್ಲಿ ಪ ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಆದ್ಯತೆಯ ಮೇಲೆ ಪಡಿತರ ಅಂಗಡಿಗಳನ್ನು ಮಂಜೂರು ಮಾಡಬೇಕು. ಪ ಜಾತಿ ಸಮುದಾಯದಲ್ಲಿ ಮೀಸಲಾತಿಯನುಸಾರ ಒಳಮೀಸಲಾತಿಯನ್ನು ಅನುಸರಿಸಬೇಕು’ ಎಂದವರು ಸೂಚಿಸಿದರು.
ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಕುರಿತಂತೆ ಪ್ರಕಟಣೆ ಹೊರಡಿಸುವ ಸಂದರ್ಭದಲ್ಲಿ ಪ.ಜಾತಿ ಮತ್ತು ಪಂಗಡದ ಸಮುದಾಯದವರಿಗೆ ಮೀಸಲಿಟ್ಟಿರುವ ಅಂಗಡಿಗಳ ಸಂಖ್ಯೆಯನ್ನು ನಮೂದಿಸುವಂತೆ ಅವರು ತಿಳಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ.ಜಾತಿ ಪಂಗಡದ ಸಮುದಾಯದ ಶೇ 40 ಕ್ಕಿಂತಲೂ ಹೆಚ್ಚಿನ ಜನ ವಾಸವಿರುವ ಪ್ರದೇಶಗಳ ಮಾಹಿತಿಯನ್ನು ಆಹಾರ ಇಲಾಖೆ ಅಧಿಕಾರಿಗಳಿಗೆ ಒದಗಿಸುವಂತೆ ಸಮಾಜ ಕಲ್ಯಾಣ ಮತ್ತು ಪ.ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಜುನಾಥ ರೇವಣ್ಕರ, ಪೌರಾಯುಕ್ತ ಜಗದೀಶ್ ಹುಲಿಗಜ್ಜಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಆಹಾರ ಇಲಾಖೆಯ ತಾಲೂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.