ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದಲ್ಲದೇ ಗುಡ್ಡಗಾಡು ಮಕ್ಕಳ ಶೈಕ್ಷಣಿಕ ಸೇವೆ ಮಾಡುತ್ತಿರುವ ಕಾರವಾರದ ದಿನಕರ ಸಾಳುಂಕೆ ಅವರಿಗೆ `ಆದಿ ಲೋಕೋತ್ಸವ ಪ್ರಶಸ್ತಿ’ ದೊರೆತಿದೆ.
ಕಾರವಾರದ ಅಸ್ನೋಟಿಯ ಕೊಳಗೆ ಗ್ರಾಮದವರಾದ ದಿನಕರ ಸಾಳುಂಕೆ ಅವರು ತಮ್ಮ ಬಾಲ್ಯವನ್ನು ದಾಂಡೇಲಿಯಲ್ಲಿ ಕಳೆದಿದ್ದರು. ಅಲ್ಲಿನ ಜನತಾ ವಿದ್ಯಾಲಯದಲ್ಲಿ ಓದಿದ ಅವರು ಗುಡ್ಡಗಾಡು ಮಕ್ಕಳ ಕಷ್ಟವನ್ನು ಹತ್ತಿರದಿಂದ ನೋಡಿದ್ದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಪ್ರತಿಭೆ ಹಾಗೂ ಶ್ರಮದ ಫಲವಾಗಿ ಡಿಪ್ಲೋಮಾ ಸಿವಿಲ್ ಪೂರೈಸಿದರು. ಕಾರವಾರ ಬಂದರುವಿನಲ್ಲಿ ಕೆಲಸ ಶುರು ಮಾಡಿದ ಅವರಿಗೆ ಮಹಾರಾಷ್ಟ ಸರ್ಕಾರ ಉದ್ಯೋಗ ನೀಡಿತು. ಮೂರು ವರ್ಷದ ಸರ್ಕಾರಿ ಸೇವೆ ನಂತರ ಇಂಜಿನಿಯರ್ ಹುದ್ದೆ ತ್ಯಜಿಸಿದ ಅವರು ಸ್ವಂತ ಕಂಪನಿ ಕಟ್ಟಿದರು.
ಪ್ರೀಮಿಯರ್ ಹಾಸ್ಪಿಟಾಲಿಟಿಸ್ & ಡೇವಲಪರ್ಸ ಇಂಡಿಯಾ ಪೈ ಲಿ ಹಾಗೂ ಪ್ರೀಮಿಯರ್ ಲೈಫ್ ಸ್ಟೈಲ್ ಬಿಲ್ಡರ್ಸ ಮೂಲಕ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟದಲ್ಲಿ ಜಲ ವಿದ್ಯುತ್, ರಸ್ತೆ ಸೇರಿ ಅನೇಕ ಬಗೆಯ ಕಾಮಗಾರಿಗಳ ಗುತ್ತಿಗೆ ಕಾರ್ಯ ನಿರ್ವಹಿಸಿದ್ದಾರೆ. ಈ ಎಲ್ಲದರ ಜೊತೆ ಜೊಯಿಡಾ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಓದಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದ ಹಾಸ್ಟೇಲ್ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅವರು ನೆರವಾಗಿದ್ದಾರೆ.
ದಿನಕರ ಸಾಳುಂಕೆ ಅವರ ಈ ಎಲ್ಲಾ ಸಾಧನೆ ಗಮನಿಸಿ ಗೋವಾ ಸರ್ಕಾರದ ಸಚಿವ ರಮೇಶ ಬಿ ತಾವಡ್ಕರ ಅವರು `ಆದಿ ಲೋಕೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ಕಾರವಾರದ ರಾಘವೇಂದ್ರ ಗಾಂವಕರ ಇತರರು ಈ ಪ್ರಶಸ್ತಿ ವಿತರಣೆಗೆ ಸಾಕ್ಷಿಯಾಗಿದ್ದರು. ದಿನಕರ ಸಾಳುಂಕೆ ಅವರಿಗೆ ಭಾರತೀಯ ವಿಕಾಸ ರತ್ನ ಅವಾರ್ಡ್, ಅಚಿವರ್ಸ ಆಫ್ ಕರ್ನಾಟಕ ಅವಾರ್ಡ್ ಹಾಗೂ ಶಿಕ್ಷಣ ಸೇವಾ ರತ್ನ ಪ್ರಶಸ್ತಿಗಳು ಸಹ ಸಂದಿವೆ.