ಕಡಿಮೆ ಬೆಲೆಗೆ ಸರಾಯಿ ಖರೀದಿಸಿ ಅದನ್ನು ದುಬಾರಿ ಬೆಲೆಗೆ ಮಾರಲು ಯತ್ನಿಸಿದ್ದ ನಾರಾಯಣ ದಲಬಂಜನ್ ಅವರ ಯೋಜನೆ ಉಲ್ಟಾ ಆಗಿದೆ. ಗೋವಾದಿಂದ ಹುಬ್ಬಳ್ಳಿಗೆ ಸರಾಯಿ ಸಾಗಿಸುತ್ತಿದ್ದ ವೇಳೆ ನಾರಾಯಣ ದಲಬಂಜನ್ ಅವರು ಸಿಕ್ಕಿಬಿದ್ದಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆ ಸಮೀಪದ ನೆಹರು ನಗರದಲ್ಲಿ ನಾರಾಯಣ ದಲಬಂಜನ್ ಅವರು ವಾಸವಾಗಿದ್ದಾರೆ. ಜನವರಿ 12ರಂದು ಸ್ಕಾರ್ಪಿಯೋದಲ್ಲಿ ಗೋವಾಗೆ ಹೋಗಿದ್ದ ಅವರು ಅಲ್ಲಿ ಬಗೆ ಬಗೆಯ ಮದ್ಯದ ಬಾಟಲಿಗಳನ್ನು ಖರೀದಿಸಿದ್ದಾರೆ. 1.26 ಲಕ್ಷ ರೂ ಮೌಲ್ಯದ ಸರಾಯಿ ಖರೀದಿಸಿದ ಅವರು ಆ ಸರಾಯಿಯನ್ನು ಹುಬ್ಬಳ್ಳಿಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ತಮ್ಮ ವಾಹನದ ತುಂಬ ಸರಾಯಿ ಬಾಟಲಿ ಹಾಕಿಕೊಂಡು ಅವರು ಅದೇ ದಿನ ರಾತ್ರಿ ಗೋವಾ ಗಡಿ ದಾಟಿದ್ದಾರೆ.
ಖಚಿತ ಮಾಹಿತಿ ಆಧಾರದಲ್ಲಿ ಕಾಯುತ್ತಿದ್ದ ಪೊಲೀಸರು ಮೂಡಗೇರಿಯಿಂದ ಸದಾಶಿವಗಡ ಚಿಂಚೆವಾಡ ಬರುವ ಮಾರ್ಗದಲ್ಲಿ ಬರುತ್ತಿದ್ದ ಸ್ಕಾರ್ಪಿಯೋಗೆ ಅಡ್ಡಲಾಗಿ ಕೈ ಮಾಡಿದ್ದಾರೆ. ಇಲ್ಲಿನ ಹಳೆ ಐಸ್ ಪಾಕ್ಟರಿ ಹತ್ತಿರ ಆ ವಾಹನವನ್ನು ನಿಲ್ಲಿಸಿದ್ದಾರೆ. ಪಿಸೈ ಪರಶುರಾಮ ಮಿರ್ಜಗಿ ವಾಹನ ತಪಾಸಣೆ ನಡೆಸಿದಾಗ ಅವರಿಗೆ ಬಂದ ಮಾಹಿತಿಯಂತೆ ಅಲ್ಲಿ ಸರಾಯಿ ಬಾಟಲಿಗಳು ಕಾಣಿಸಿವೆ. ಗೋವಾದಲ್ಲಿ ಮಾತ್ರ ಮಾರಾಟಕ್ಕೆ ಸಿಗುವ ಸರಾಯಿ ಬಾಟಲಿಯನ್ನು ಅಕ್ರಮವಾಗಿ ಕರ್ನಾಟಕಕ್ಕೆ ತಂದ ಕಾರಣ ಅದೆಲ್ಲವನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಭಾರೀ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ಕಾರ್ಯವನ್ನು ಎಸ್ಪಿ ದೀಪನ್ ಎಂ ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ, ಜಗದೀಶ ಎಂ, ಡಿವೈಎಸ್ಪಿ ಗಿರೀಶ ಎಸ್ ವಿ ಹಾಗೂ ಕದ್ರಾ ಸಿಪಿಐ ಪ್ರಭಾಕರ ಧರ್ಮಟ್ಟಿ ಶ್ಲಾಘಿಸಿದ್ದಾರೆ. ಎಸೈ ಸಂತೋಷ ನಾಯ್ಕ, ಗೌಥಮ ರೊಡ್ಡನ್ನನವರ್, ವಿನಯ ಕಾಣಕೋಣಕರ್, ಬಸಪ್ಪಾ ಕಿತ್ತೂರ, ಅಭಿಜಿತ್ ಆರ್ ಎಲ್ ಹಾಗೂ ಪ್ರದೀಪ ಈ ಕಾರ್ಯಾಚರಣೆ ನಡೆಸಿದವರಾಗಿದ್ದಾರೆ.