ಶಿರಸಿಯ ಬಂಡಲ್-ಕಸಗೆ ರಸ್ತೆ ನಿರ್ಮಾಣದ ವೇಳೆ ವ್ಯಕ್ತಿಯೊಬ್ಬರ ಸಾವಾಗಿದೆ. ಹೊಸದಾಗಿ ನಿರ್ಮಿಸಿದ ರಸ್ತೆಗೆ ಅಡಿಕೆ ಸಿಪ್ಪೆ ಸುರಿಯುತ್ತಿದ್ದ ಅಜಿತಕುಮಾರ ಪಲ್ಲಿಗಟ್ಟಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.
ಆಂದ್ರ ಪ್ರದೇಶದ ಅಜಿತಕುಮಾರ ಪಲ್ಲಿಗಟ್ಟಿ (27) ಅವರು ಶಿರಸಿ ಬಂಡಲದಲ್ಲಿ ವಾಸವಾಗಿದ್ದರು. ಅಲ್ಲಿನ ರಸ್ತೆ ನಿರ್ಮಾಣ ಕೆಲಸಕ್ಕಾಗಿ ಅವರು ದುಡಿಯುತ್ತಿದ್ದರು. ಜನವರಿ 11ರಂದು ಹೊಸದಾಗಿ ನಿರ್ಮಿಸಿದ ರಸ್ತೆಗೆ ಅವರು ಅಡಿಕೆ ಸಿಪ್ಪೆ ಹೊಯ್ಯುತ್ತಿದ್ದರು. ಟಿಪ್ಪರಿನಲ್ಲಿ ಅಡಿಕೆ ಸಿಪ್ಪೆ ತಂದ ಅಜಿತಕುಮಾರ ಪಲ್ಲಿಗಟ್ಟಿ ಅವರು ಟಿಪ್ಪರ ಹಿಂಭಾಗ ಕಬ್ಬಿಣದ ಹಿಡಿಕೆ ಹಿಡಿದು ಅದನ್ನು ರಸ್ತೆ ಮೇಲೆ ಚಲ್ಲುತ್ತಿದ್ದರು.
ಆ ರಸ್ತೆ ಮೇಲ್ಬಾಗ ವಿದ್ಯುತ್ ಲೈನ್ ಹಾದು ಹೋಗಿದ್ದು, ಅದನ್ನು ಅಜಿತಕುಮಾರ ಪಲ್ಲಿಗಟ್ಟಿ ಅವರು ಗಮನಿಸಲಿಲ್ಲ. ಅಲ್ಲಿ ವಿದ್ಯುತ್ ತಂತಿಯಿರುವುದು ಟಿಪ್ಪರ್ ಚಾಲಕನ ಅರಿವಿಗೂ ಬರಲಿಲ್ಲ. ಟಿಪ್ಪರ್ ಮುಂದೆ ಸಾಗುತ್ತಲೇ ಅದರ ಹಿಂದಿನ ಭಾಗವನ್ನು ಮೇಲೆತ್ತುವಾಗ ಟಿಪ್ಪರಿಗೆ ವಿದ್ಯುತ್ ತಂತಿ ಸ್ಪರ್ಶಿಸಿತು. ಪರಿಣಾಮ ಅಜಿತಕುಮಾರ ಪಲ್ಲಿಗಟ್ಟಿ ಅಲ್ಲಿಯೇ ಕೊನೆಯುಸಿರೆಳೆದರು.