ಕಷ್ಟ ಕಾಲದಲ್ಲಿ ಸಾಲಪಡೆದು ನಂತರ ಅದನ್ನು ತೀರಿಸದೇ ವಂಚಿಸಲು ಪ್ರಯತ್ನಿಸಿದ ಕಮಲಾಕರ ಭಂಡಾರಿ ಅವರಿಗೆ ಶಿರಸಿ ನ್ಯಾಯಾಲಯ ದಂಡ ವಿಧಿಸಿದೆ. 10 ಲಕ್ಷ ರೂ ಸಾಲ ಮಾಡಿದ್ದ ವ್ಯಕ್ತಿಗೆ 17 ಲಕ್ಷ ರೂ ಪರಿಹಾರದ ಜೊತೆ 20 ಸಾವಿರ ರೂ ದಂಡ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಕಮಲಾಕರ್ ನರಸಿಂಹ ಭಂಡಾರಿ ಎಂಬಾತರು 2019ರಲ್ಲಿ ಶಿರಸಿ ನಗರದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಮಾಡಿದ್ದರು. ಕಷ್ಟ ಎಂದು ಬಂದ ವ್ಯಕ್ತಿಯ ಮೇಲೆ ಕರುಣೆ ತೋರಿದ ಬ್ಯಾಂಕ್ ಅಧಿಕಾರಿಗಳು ಅವರ ಅಗತ್ಯಕ್ಕೆ ಅನುಗುಣವಾಗಿ ಸಾಲ ನೀಡಿದ್ದರು. 10 ಲಕ್ಷ ರೂ ಸಾಲಪಡೆದಿದ್ದ ಕಮಲಾಕರ ಭಂಡಾರಿ ಅವರು ಕಂತು ಪಾವತಿ ಮಾಡಿರಲಿಲ್ಲ. ಪಡೆದ ಸಾಲ ತೀರಿಸುವುದನ್ನು ಸಹ ಅವರು ಮರೆತಿದ್ದರು.
ಸೊಸೈಟಿ ಸಿಬ್ಬಂದಿ ಸಾಲ ವಸೂಲಾತಿಗೆ ಹೋದಾಗ ಬಡ್ಡಿ ಸೇರಿ 13.27 ಲಕ್ಷ ರೂ ಮೌಲ್ಯದ ಚೆಕ್ ನೀಡಿದ್ದರು. ಆದರೆ, ಬ್ಯಾಂಕಿಗೆ ಹಾಕಿದ ಆ ಚೆಕ್ ಸಹ ಅಮಾನ್ಯವಾಗಿತ್ತು. ಸಾಕಷ್ಟು ಬಾರಿ ಕೇಳಿದರೂ ಕಮಲಾಕರ ಭಂಡಾರಿ ಸಾಲ ಮರು ಪಾವತಿಗೆ ಪ್ರಯತ್ನಿಸಿರಲಿಲ್ಲ. ಹೀಗಾಗಿ ಸಹಕಾರಿ ಸಂಘದವರು ಅನಿವಾರ್ಯವಾಗಿ ಕಾನೂನು ಹೋರಾಟ ಶುರು ಮಾಡಿದರು. ಚೆಕ್ ಬೌನ್ಸ್ ಆಧಾರದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ಕಮಲಾಕರ ಭಂಡಾರಿ ಅವರ ವಿರುದ್ಧ ಪ್ರಕರಣ ದಾಖಲಿಸಿದರು.
ಶಿರಸಿ 1ನೇ ಹೆಚ್ಚುವರಿ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ ದಾವೆ ಪ್ರಕರಣ ವಿಚಾರಣೆ ನಡೆಯಿತು. `ಕಷ್ಟ ಕಾಲದಲ್ಲಿ ಸಾಲ ನೀಡುವ ಸಹಕಾರಿ ಸಂಘಕ್ಕೆ ವಂಚನೆ ಮಾಡುವುದು ಸರಿಯಲ್ಲ. ಸಹಕಾರಿ ಸಂಘದ ಏಳಿಗೆಗೆ ಸಾಲಗಾರರು ಕಂತು ಪಾವತಿ ಮಾಡುವುದು ಅತಿ ಮುಖ್ಯವಾಗಿದ್ದು, ಚೆಕ್ ಬೌನ್ಸ್ ಆರೋಪಿಗೆ ಶಿಕ್ಷೆ ವಿಧಿಸಬೇಕು’ ಎಂದು ವಕೀಲ ಪ್ರಶಾಂತ್ ವಿ ನಾಯ್ಕ ವಾದ ಮಂಡಿಸಿದರು. ಈ ವಾದ ಆಲಿಸಿದ ನ್ಯಾಯಾಧೀಶ ಅಲ್ತಾಫ್ ಹುಸೇನಸಾಬ್ ಖನಗಾಂವಿ ಅವರು ಕಮಲಾಕರ ಭಂಡಾರಿ ಅವರಿಗೆ ದಂಡ ವಿಧಿಸಿದರು.
`ಸಾಲಪಡೆದು ವಂಚಿಸಲು ಪ್ರಯತ್ನಿಸಿದ ಕಮಲಾಕರ ಭಂಡಾರಿ ಅವರು ಸಾಲ ನೀಡಿದ ಸಂಘಕ್ಕೆ ಪರಿಹಾರವಾಗಿ ಕಮಲಾಕರ ಭಂಡಾರಿ ಅವರು 17 ಲಕ್ಷ ರೂ ಪಾವತಿಸಬೇಕು. 20 ಸಾವಿರ ರೂಪಾಯಿಯನ್ನು ಸರ್ಕಾರಕ್ಕೆ ದಂಡವಾಗಿ ಪಾವತಿಸಬೇಕು. ಇದನ್ನು ತಪ್ಪಿದರೆ 6 ತಿಂಗಳು ಕಾರಾಗೃಹವಾಸ ಅನುಭವಿಸಬೇಕು’ ಎಂದು ಆದೇಶಿಸಿದರು.