ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡಿರುವ ರೇಖಾ ನಾಯ್ಕ ಅವರನ್ನು ಅನುದಾನಿತ ಶಿಕ್ಷಕರ ಸಂಘದ ಸದಸ್ಯರು ಸನ್ಮಾನಿಸಿ, ಸ್ವಾಗತಿಸಿದ್ದಾರೆ. ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವoತೆ ಮನವಿಯನ್ನು ಮಾಡಿದ್ದಾರೆ.
ವೈ ಟಿ ಎಸ್ ಎಸ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಅನುದಾನಿತ ಶಿಕ್ಷಕರ ಸಂಘದವರು ಶಿಕ್ಷಣಾಧಿಕಾರಿ ರೇಖಾ ನಾಯ್ಕ ಅವರನ್ನು ಭೇಟಿ ಮಾಡಿದರು. ಸರ್ಕಾರದ ಕಾರ್ಯಕ್ರಮಗಳ ಯಶಸ್ಸಿಗೆ ಶಿಕ್ಷಕರು ಶ್ರಮಿಸುತ್ತಿರುವ ವಿಧಾನಗಳ ಬಗ್ಗೆ ವಿವರಿಸಿದರು. 60 ಶಿಕ್ಷಕರು ಸೇರಿ ಶಿಕ್ಷಣಾಧಿಕಾರಿಗಳನ್ನು ಗೌರವಿಸಿದರು.
`ಯಲ್ಲಾಪುರದ ಅಭಿವೃದ್ಧಿಗೆ ಅನುದಾನಿತ ಶಾಲೆಗಳ ಕೊಡುಗೆ ಅಪಾರವಾಗಿದೆ. ಶಿಸ್ತು ಬದ್ಧ ಸಂಘಟನೆಗೆ ಅನುದಾನಿತ ಶಿಕ್ಷಕರು ಮಾದರಿಯಾಗಿದ್ದು, ಪರೀಕ್ಷಾ ಫಲಿತಾಂಶ ಹೆಚ್ಚಳದಲ್ಲಿಯೂ ಶಿಕ್ಷಕರು ಕೊಡುಗೆ ನೀಡುತ್ತಿದ್ದಾರೆ’ ಎಂದು ಶಿಕ್ಷಣಾಧಿಕಾರಿ ರೇಖಾ ನಾಯ್ಕ ಅವರು ಹೇಳಿದರು. `ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಶಿಕ್ಷಣ ನೀಡಲು ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅನುದಾನಿತ ಶಿಕ್ಷಕರ ಸಮಸ್ಯೆಗಳಿಗೂ ಶಿಕ್ಷಣ ಇಲಾಖೆ ಸ್ಪಂದಿಸಲಿದೆ’ ಎಂಬ ಭರವಸೆ ನೀಡಿದರು.
`ವಿಜ್ಞಾನ, ಸಾಂಸ್ಕೃತಿಕ, ಪ್ರತಿಭಾ ಕಾರಂಜಿ, ಕ್ರೀಡೆಯಂಥ ವಿವಿಧ ಕಾರ್ಯಕ್ರಮಗಳಲ್ಲಿ ಅನುದಾನಿತ ಶಾಲೆಗಳ ಶಿಕ್ಷಕರ ಹಾಗೂ ಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದಾಗಿದೆ’ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೋಪ್ಪ ಅವರು ಹೇಳಿದರು.