ಕಾಡಿನಲ್ಲಿದ್ದ ಮರಗಳನ್ನು ಕಡಿದು ಅದನ್ನು ಮಾರಾಟ ಮಾಡುತ್ತಿದ್ದ ಕಿರಣ ನಾಯ್ಕ ವಿರುದ್ಧ ಸಿದ್ದಾಪುರ ಅರಣ್ಯ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಿದ್ದಾರೆ. ಕಿರಣ ನಾಯ್ಕ ತಪ್ಪಿಸಿಕೊಂಡಿದ್ದರೂ ನಾಟಾ ಸಾಗಿಸಲು ಬಳಸಿದ್ದ ವಾಹನವನ್ನು ಜಪ್ತು ಮಾಡಿದ್ದು, ವಾಹನ ಮಾಲಕನನ್ನು ಬಂಧಿಸಿದ್ದಾರೆ.
ಸಿದ್ದಾಪುರದ ಕ್ಯಾದಗಿ ವಲಯದ ಹಸ್ವಿಗುಳಿಯಲ್ಲಿ ಕಿರಣ ರಾಮಾ ನಾಯ್ಕ ಎಂಬಾತರು ಮರ ಕಟಾವು ಮಾಡಿದ್ದರು. ಅದನ್ನು ಅಲ್ಲಿಯೇ ದಾಸ್ತಾನು ಮಾಡಿದ್ದ ಅವರು ನಂತರ ತಮ್ಮ ಮನೆ ಬಳಿ ಸಾಗಿಸಿದ್ದರು. ಭರಣಿ ಜಾತಿಗೆ ಸೇರಿದ ಮರಗಳನ್ನು ತುಂಡರಿಸಿ ಅಗತ್ಯ ಅಳತೆಗಳನ್ನು ಮಾಡಿಕೊಂಡಿದ್ದರು. ಖಚಿತ ಮಾಹಿತಿ ಆಧರಿಸಿ ಅರಣ್ಯ ಅಧಿಕಾರಿಗಳು ಅಲ್ಲಿ ದಾಳಿ ಮಾಡಿದರು. ಆಗ, ಅಲ್ಲಿ ನಾಟಾ ಸಾಗಾಟಕ್ಕೆ ಬಳಸಿದ ವಾಹನ ಹಾಗೂ ವಾಹನದ ಮಾಲಕ ಸಿಕ್ಕಿಬಿದ್ದರು.
ಅರಣ್ಯಾಧಿಕಾರಿಗಳ ಆಗಮನ ಅರಿತು ಕಿರಣ ನಾಯ್ಕ ಪರಾರಿಯಾದರು. ವಾಹನ ಹಾಗೂ ವಾಹನ ಮಾಲಕನನ್ನು ವಶಕ್ಕೆಪಡೆದ ಅಧಿಕಾರಿಗಳು ಆರೋಪಿ ಕಿರಣ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿದರು. ಜೊತೆಗೆ ಶೋಧ ಕಾರ್ಯ ಮುಂದುವರೆಸಿದರು. 3.820ಕ್ಯೂಬಿಕ್ ಮೀಟರ್ ನಾಟಾ ದಾಳಿಯಲ್ಲಿ ಸಿಕ್ಕಿದೆ.