ಮುಂಡಗೋಡಿನಲ್ಲಿ ಅಪ್ಪ-ಮಗನ ನಡುವೆ ಕೌಟುಂಬಿಕ ಕಲಹ ನಡೆದಿದ್ದು, ಈ ವೇಳೆ ಸಿಟ್ಟಾದ ಶಿವರಾಜ ಅವರು ತಂದೆ ಶಿವಾನಂದ ಅವರ ಮೇಲೆ ಕತ್ತಿ ಬೀಸಿದ್ದಾರೆ.
ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ ಗುರುವಾರ ಈ ದುರಂತ ನಡೆದಿದೆ. ಶಿವಾನಂದ ಎಂಬಾತರ ಮೇಲೆ ಕತ್ತಿ ಪ್ರಯೋಗ ನಡೆದಿದೆ. ಅವರ ಮಗ ಶಿವರಾಜ ಎಂಬಾತರು ಕತ್ತಿ ಬೀಸಿದ್ದು, ದಾಳಿಗೆ ತುತ್ತಾದ ಶಿವಾನಂದ ಅವರು ಸದ್ಯ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
42 ವರ್ಷದ ಶಿವಾನಂದ ಹಾಗೂ ಅವರ ಪುತ್ರನ ನಡುವೆ ಮೊದಲಿನಿಂದಲೂ ವೈಮನಸ್ಸಿತ್ತು. ಗುರುವಾರ ಅವರಿಬ್ಬರ ನಡುವಿನ ದ್ವೇಷ ತಾರಕಕ್ಕೇರಿತು. ಪರಿಣಾಮ ಶಿವಾನಂದ ಅವರ ಮೇಲೆ ಅವರ ಪುತ್ರ ಕತ್ತಿಯಿಂದ ಹಲ್ಲೆ ಮಾಡಿದರು. ಅದಾದ ನಂತರ ಶಿವರಾಜ ಸ್ಥಳದಿಂದ ಪರಾರಿಯಾಗಿದ್ದಾರೆ.
ಶಿವಾನಂದ ಅವರ ಕುತ್ತಿಗೆಯ ಮೇಲೆ ಕತ್ತಿಯಿಂದ ಏಟು ಬಿದ್ದಿದೆ. ಕೊಲೆ ಮಾಡುವ ಉದ್ದೇಶದಿಂದಲೇ ಶಿವರಾಜ ಅವರು ಕತ್ತಿ ಬೀಸಿದ ಅನುಮಾನವಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಾನಂದ ಅವರನ್ನು ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.