ಹೊನ್ನಾವರದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ರಾಮತೀರ್ಥವನ್ನು ಕೆಲವರು `ತೀರ್ಥ’ ಸೇವನೆಗೆ ಬಳಸುತ್ತಿದ್ದಾರೆ. ಆ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳು ಬಿದ್ದಿವೆ.
ಪ್ರತಿ ದಿನ ಸಂಜೆ ಇಲ್ಲಿ ಯುವಕರ ಗುಂಪೊAದು ಬರುತ್ತದೆ. ಮಾದಕ ವ್ಯಸನದಲ್ಲಿ ತೊಡಗುವ ಆ ಗುಂಪಿನ ಸದಸ್ಯರು ರಾಮತೀರ್ಥವನ್ನು ಗಲೀಜು ಮಾಡಿ ಹೋಗುತ್ತಾರೆ. ಅದರ ಪರಿಣಾಮ ರಾಮತೀರ್ಥದ ಸುತ್ತಲು ಬಿಯರ್ ಬಾಟಲಿ, ಸಿಗರೇಟಿನ ತುಂಡು, ಸರಾಯಿ ಪ್ಯಾಕೇಟ್ ಹಾಗೂ ಶೆಂಗಾ ಕೊಟ್ಟೆಗಳು ಬಿದ್ದಿವೆ. ನಿತ್ಯ ಪೂಜೆಗೆ ಅಲ್ಲಿ ಬರುವ ಭಟ್ಟರಿಗೂ ಹೇಸಿಗೆ ಆಗುವಷ್ಟರ ಮಟ್ಟಿಗೆ ಆ ಪ್ರದೇಶ ಗಬ್ಬೆದ್ದಿದೆ.
ರಾಮತೀರ್ಥ ಪ್ರದೇಶದಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳು ಹಾಳಾಗಿದೆ. ಅಲ್ಲಿನ ಶೌಚಾಲಯದ ಬಾಗಿಲು ಮುರಿದು ವರ್ಷ ಕಳೆದಿದೆ. ಇಂಥ ಅವ್ಯವಸ್ಥೆಗಳು ಪುಂಡಪೋಕರಿಗಳಿಗೆ ವರದಾನವಾಗಿದೆ. ದೇವರ ದರ್ಶನಕ್ಕೆ ಬರುವವರಿಗೆ ಮೊದಲು ಅಲ್ಲಿನ ಗಬ್ಬು ಪ್ರದೇಶದ ದರ್ಶನವಾಗುತ್ತಿದೆ. ಈ ಬಗ್ಗೆ ಮಾಹಿತಿಯಿದ್ದರೂ ಯಾರೂ ತಲೆಕೆಡಿಸಿಕೊಂಡಿಲ್ಲ.
ಶುಕ್ರವಾರ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಅವರು ಈ ಪ್ರದೇಶಕ್ಕೆ ಭೇಟಿ ನೀಡಿದ್ದು, ಅವ್ಯವಸ್ಥೆಗಳ ವಿರುದ್ಧ ಅಸಮಧಾನವ್ಯಕ್ತಪಡಿಸಿದರು. `ಈ ಭಾಗದಲ್ಲಿ ಪೊಲೀಸರು ಬೀಟ್ ವ್ಯವಸ್ಥೆ ಬಿಗಿಗೊಳಿಸಬೇಕು. ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು’ ಎಂದು ಆಗ್ರಹಿಸಿದರು. ಅವ್ಯವಸ್ಥೆಗಳ ಬಗ್ಗೆ ಅಲ್ಲಿನ ಸುಬ್ರಾಯ ಹೆಬ್ಬಾರ ಅವರು ಆಕ್ರೋಶವ್ಯಕ್ತಪಡಿಸಿದರು.