`ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರ ಮಾಲಿಕತ್ವದ ನಿಸರ್ಗಮನೆಯಲ್ಲಿ ಏನೇನು ನಡೆಯುತ್ತಿದೆ? ಎಂಬುದು ಎಲ್ಲರಿಗೂ ಗೊತ್ತಿದೆ. ಅವರಿವರಿಗೆ ವಂಚಿಸಿ ಶಿಕ್ಷಣವನ್ನು ವ್ಯಾಪಾರವನ್ನಾಗಿಸಿದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಅವರಿಂದಲೂ ಶಿವರಾಮ ಹೆಬ್ಬಾರ್ ನೈತಿಕತೆ ಹಾಗೂ ಬದ್ಧತೆಯ ಪಾಠ ಕಲಿಯಬೇಕಿಲ್ಲ’ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ಬೆಂಬಲಿಗರು ಹೇಳಿದ್ದಾರೆ.
ಹಾವೇರಿಯಲ್ಲಿರುವ ಕಾರ್ಖಾನೆ ಉಳಿಸಿಕೊಳ್ಳುವುದಕ್ಕಾಗಿ ಶಿವರಾಮ ಹೆಬ್ಬಾರ್ ಅವರು ನದಿ ತಿರುವು ಯೋಜನೆ ಪರ ಒಲವು ಹೊಂದಿದ್ದಾರೆ ಎಂದು ಬಿಜೆಪಿಗರು ದೂರಿದ್ದರು. ಈ ಆರೋಪಕ್ಕೆ ಶಿವರಾಮ ಹೆಬ್ಬಾರ್ ಬೆಂಬಲಿಗರು ತಿರುಗೇಟು ನೀಡಿದ್ದಾರೆ. ಶಿವರಾಮ ಹೆಬ್ಬಾರ್ ಅವರ ಉದ್ದಿಮೆಯ ಬಗ್ಗೆ ಮಾತನಾಡಿದ ಪ್ರಸಾದ ಹೆಗಡೆ ಹಾಗೂ ಹರಿಪ್ರಕಾಶ ಕೋಣೆಮನೆ ಅವರ ವ್ಯವಹಾರಗಳ ಬಗ್ಗೆಯೂ ಹೆಬ್ಬಾರ್ ಬೆಂಬಲಿಗರು ಪ್ರಶ್ನಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಸ್ ಭಟ್ಟ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ಭಟ್ಟ ಬರಗದ್ದೆ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷ ಪ್ರೇಮಾನಂದ ನಾಯ್ಕ ಈ ಕುರಿತು ಪ್ರಕಟಣೆ ನೀಡಿದ್ದು, ಪ್ರಸಾದ ಹೆಗಡೆ ಹಾಗೂ ಹರಿಪ್ರಕಾಶ ಕೋಣೆಮನೆ ಅವರ ನಡೆಯನ್ನು ಪ್ರಮುಖರಾದ ಲಾರೇನ್ಸ್ ಸಿದ್ದಿ, ನರಸಿಂಹ ನಾಯ್ಕ, ಗೋಪಾಲ ಸಿದ್ದಿ, ಗಜಾನನ ಭಟ್ಟ, ಕುಪ್ಪಯ್ಯ ಪೂಜಾರಿ ಹಾಗೂ ಗಣೇಶ ಹೆಗಡೆ ಪಣತಗೇರಿ ಖಂಡಿಸಿದ್ದಾರೆ.
`ಪ್ರಸಾದ ಹೆಗಡೆ ಬೇರೆಯವರ ಬಗ್ಗೆ ಮಾತನಾಡುವ ಬದಲು ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಹಿನ್ನಲೆ ಬಗ್ಗೆ ಅರಿತುಕೊಳ್ಳಬೇಕು’ ಎಂದು ಅವರೆಲ್ಲರೂ ಸಲಹೆ ನೀಡಿದ್ದಾರೆ. `ಹರಿಪ್ರಕಾಶ ಕೋಣೆಮನೆ ಬೇರೆಯವರ ದುಡ್ಡಿನಲ್ಲಿ ಸುದ್ದಿ ಸಂಸ್ಥೆ ಮಾಡಿ ಅದನ್ನು ದಿವಾಳಿಯಾಗಿಸಿದ್ದಾರೆ. ಬೇರೆಯವರು ಕಟ್ಟಿದ ಶಿಕ್ಷಣ ಸಂಸ್ಥೆಯನ್ನು ಬೇರೆಯವರ ಹಣದಲ್ಲಿ ಖರೀದಿ ಮಾಡಿ, ಹಣ ನೀಡಿದವರಿಗೆ ಮೋಸ ಮಾಡಿದ್ದಾರೆ. ಅವರಿಗೆ ಹಣ ಕೊಟ್ಟ ಅನೇಕರು ಕೋರ್ಟ ಮೆಟ್ಟಿಲೇರಿದರೂ ಹರಿಪ್ರಕಾಶ ಕೋಣೆಮನೆ ಶಿಕ್ಷಣವನ್ನು ವ್ಯಾಪಾರವನ್ನಾಗಿಸಿಕೊಂಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ರಾಜಕೀಯ ಹಂಬಲಕ್ಕಾಗಿ ನಿನ್ನೆ-ಮೊನ್ನೆ ಯಲ್ಲಾಪುರಕ್ಕೆ ಕಾಲಿಟ್ಟಿರುವ ಕೋಣೆಮನೆ ಅವರು ನಾಲ್ಕು ದಶಕದಿಂದ ಯಲ್ಲಾಪುರದ ಜನರ ಜೊತೆಯಿರುವ ಶಿವರಾಮ ಹೆಬ್ಬಾರ್ ಅವರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ’ ಎಂದು ಹೇಳಿದ್ದಾರೆ.
`ಶಿವರಾಮ ಹೆಬ್ಬಾರ್.ಅವರು ಸಚಿವರಾಗಿದ್ದ ಅವಧಿಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಬಗ್ಗೆ ವಿರೋಧಿಸಿದ್ದರು. ಶಿಗ್ಗಾವಿಯಲ್ಲಿ ಶಿವರಾಮ ಹೆಬ್ಬಾರ್ ಒಡೆತನದ ಕಾರ್ಖಾನೆ ಆಧುನಿಕ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿದ್ದು, ನೀರನ್ನು ಅವಲಂಭಿಸಿ ಅವರು ಆ ಉದ್ದಿಮೆ ಕಟ್ಟಿಲ್ಲ. ಬೋರ್‌ವೆಲ್ ಹಾಗೂ ಇನ್ನಿತರ ಜಲಮೂಲಗಳಿಂದ ಕಾರ್ಖಾನೆ ನಡೆಯುತ್ತಿದ್ದು, ತಾಂತ್ರಿಕ ವಿಷಯದ ಬಗ್ಗೆ ಮಾಹಿತಿ ಇಲ್ಲದೇ ಅವರಿಬ್ಬರು ಮಾತನಾಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ. `ಪ್ರಸಾದ ಹೆಗಡೆ ಹಾಗೂ ಹರಿಪ್ರಕಾಶ ಕೋಣೆಮನೆ ಇಬ್ಬರೂ ರಾಜಕೀಯ ತೆವಲಿಗಾಗಿ ಇಂಥ ಹೇಳಿಕೆ ನೀಡುವುದನ್ನು ಬಿಡಬೇಕು. `ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಿಂದ ಹೊರಬರಬೇಕು’ ಎಂದು ಹೇಳಿದ್ದಾರೆ.
`ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಅವರ ನೇತ್ರತ್ವದಲ್ಲಿ ಬೇಡ್ತಿ-ವರದಾ ನದಿ ಜೋಡಣೆಯ ವಿರುದ್ಧ ಹೋರಾಟ ನಡೆಯುತ್ತಿದೆ. ಶಿವರಾಮ ಹೆಬ್ಬಾರ್ ಬೆಂಬಲಿಗರೆಲ್ಲರೂ ಯೋಜನೆ ವಿರುದ್ಧ ಸ್ವಾಮೀಜಿಗಳ ಪರವಾಗಿದ್ದಾರೆ. ನೆಲ, ಜಲ ಮತ್ತು ಭಾಷೆಯ ಪ್ರಶ್ನೆ ಬಂದಾಗ ನಾವು ರಾಜಕೀಯ ಮಾಡಲು ಸಿದ್ದರಿಲ್ಲ. ನೈತಿಕತೆ ಹಾಗೂ ಬದ್ಧತೆಯ ಪಾಠ ಮಾಡುವ ಬದಲು ಬಿಜೆಪಿ ಪ್ರಮುಖರು ಹಾವೇರಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರ ಪ್ರಯತ್ನವನ್ನು ತಡೆಯಲಿ’ ಎಂದು ಸವಾಲು ಹಾಕಿದ್ದಾರೆ.