ಶಿರಸಿಯಲ್ಲಿರುವ ಬೀಡಾಡಿ ದನಗಳ ನಿಯಂತ್ರಣಕ್ಕೆ ಶಾಸಕ ಹಾಗೂ ಸಚಿವರು ಜಂಟಿ ಸಭೆ ನಡೆಸಿದರೂ ಅದರಿಂದ ದೊಡ್ಡ ಪ್ರಮಾಣದ ಪ್ರಯೋಜನ ಆಗಲಿಲ್ಲ. ಬೀಡಾಡಿ ಜಾನುವಾರು ಗುದ್ದಿದ ಪರಿಣಾಮ ಪಾದಚಾರಿಯೊಬ್ಬರ ಪ್ರಾಣ ಹೋಗಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಶಿರಸಿ ಟಿಎಸ್‌ಎಸ್ ರಸ್ತೆಯ ಜೊಸೆಫ್ ಡಯಾಸ್ (62) ಅವರು ಬೀಡಾಡಿ ಜಾನುವಾರು ಕಾಟಕ್ಕೆ ಪ್ರಾಣ ಬಿಟ್ಟಿದ್ದಾರೆ. ಹೋರಿಯೊಂದು ಅವರ ಹೊಟ್ಟೆಗೆ ಗುದ್ದಿದ್ದು ಆ ನೋವಿಗೆ ಜೊಸೆಫ್ ಡಯಾಸ್ ಅವರು ಸಾವನಪ್ಪಿದ್ದಾರೆ. ಶುಕ್ರವಾರ ಕೆಲಸಕ್ಕಾಗಿ ಮನೆಯಿಂದ ಹೊರಟ ಅವರಿಗೆ ದಿಢೀರ್ ಆಗಿ ಹೋರಿ ಒಂದು ಎದುರಾಗಿದೆ. ಜೊಸೆಫ್ ಡಯಾಸ್ ಅವರ ಮೇಲೆ ಆ ಹೋರಿ ದಾಳಿ ಮಾಡಿದೆ. ರಸ್ತೆ ಮೇಲೆ ಬಿದ್ದು ಅವರು ಪೆಟ್ಟು ಮಾಡಿಕೊಂಡಿದ್ದರು.
ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಜೊಸೆಫ್ ಡಯಾಸ್ ಅವರನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿಯೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶಿರಸಿ ನಗರದಲ್ಲಿ ಬೀಡಾಡಿ ಜಾನುವಾರು ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಅವುಗಳ ನಿಯಂತ್ರಣಕ್ಕಾಗಿ ಜನ ಪಟ್ಟು ಹಿಡಿದಿದ್ದಾರೆ.