ಫೆಬ್ರವರಿ 24ರಿಂದ ಶಿರಸಿ ಜಾತ್ರೆ ಶುರುವಾಗಲಿದ್ದು, ಅದರ ಅಂಗವಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಉಪವಾಸ ಮಾಡಲಿದ್ದಾರೆ. ಜಾತ್ರೆಗೆ ಬರುವ ಭಕ್ತರಿಗೆ ಆಗುವ ಅನಾನುಕೂಲದ ಬಗ್ಗೆ ಗಮನಸೆಳೆಯುವುದಕ್ಕಾಗಿ ಅವರು ಈ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.
ಶಿರಸಿ ಜಾತ್ರೆಗೆ ದಿನಾಂಕ ನಿಗದಿ ಆಗಿದ್ದು, ಎಲ್ಲರೂ ಜಾತ್ರೆಯ ಬಗ್ಗೆಯೇ ಯೋಚಿಸುತ್ತಿದ್ದಾರೆ. ಆದರೆ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಜಾತ್ರೆಗೆ ಬರುವವರ ಅನುಕೂಲಕ್ಕಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅದರಂತೆ, ಶಿರಸಿ ಜಾತ್ರೆಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಫೆ 3ಕ್ಕೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಘೋಷಿಸಿದ್ದಾರೆ.
`ರಾಜ್ಯದಲ್ಲಿಯೇ ಅತಿ ದೊಡ್ಡ ಶಿರಸಿ ಮಾರಿಕಾಂಬಾ ಜಾತ್ರೆಗೆ ಇನ್ನೂ ಜಾತ್ರಾ ಅನುದಾನ ಮಂಜೂರಿಯಾಗಿಲ್ಲ. ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿದರೂ ಆ ಕೆಲಸ ನಡೆದಿಲ್ಲ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಶೌಚಾಲಯ, ಸ್ನಾನಗೃಹ, ರಾತ್ರಿ ಮಲಗುವ ವ್ಯವಸ್ಥೆ, ಬೆಳಿಗ್ಗೆ ತಿಂಡಿ ವ್ಯವಸ್ಥೆ ಆಗಬೇಕು. ಕುಂಭಮೇಳದ ಮಾದರಿ ಕನಿಷ್ಟ 10 ಸಾವಿರ ಜನರಿಗೆ ಈ ಎಲ್ಲಾ ವ್ಯವಸ್ಥೆ ಮಾಡಬೇಕು’ ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ. `ಶಿರಸಿಯ ಎಲ್ಲ ಕಲ್ಯಾಣ ಮಂಟಪ ಬಾಡಿಗೆಗೆಪಡೆದು ಸರಕಾರವೇ ಅದರ ಹಣ ಪಾವತಿಸಿ ಧರ್ಮ ಛತ್ರವಾಗಿ ಪರಿವರ್ತಿಸಬೇಕು. ಬೆಳಿಗ್ಗೆ ಸ್ನಾನಕ್ಕೆ ಜನ ಕೋಟೆಕೆರೆಗೆ ಹೋಗುವುದನ್ನು ತಪ್ಪಿಸಬೇಕು. ಅಂಚೆ ಕಚೇರಿ ಪಕ್ಕದ ಮಾರಿಕಾಂಬಾ ಗದ್ದುಗೆ ಹತ್ತಿರದ ಶೌಚಾಲಯ ಸ್ವಚ್ಛಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಭೀಮಣ್ಣರ ಬಗ್ಗೆ ಅನುಕಂಪ!
ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ವೈಫಲ್ಯಗಳ ಬಗ್ಗೆ ಮಾತನಾಡುತ್ತಿದ್ದ ಅನಂತಮೂರ್ತಿ ಹೆಗಡೆ ಈ ಬಾರಿ ಭೀಮಣ್ಣ ನಾಯ್ಕ ಅವರ ಬಗ್ಗೆ ಅನುಕಂಪದ ಮಾತನಾಡಿದ್ದಾರೆ. ಸಿದ್ದಾಪುರದ ಕಾರ್ಯಕ್ರಮವೊಂದರಲ್ಲಿ ಶಾಸಕ ಭೀಮಣ್ಣ ನಾಯ್ಕ ಕರಾವಳಿ ಉತ್ಸವದ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿ `50 ಕೋಟಿ ಕ್ರಿಯಾ ಯೋಜನೆ ಮಾಡಿ ಕಳಿಸಿದರೆ ನಯಾಪೈಸೆ ಹಣ ಬಿಡುಗಡೆ ಮಾಡುತ್ತಿಲ್ಲ’ ಎಂದು ಅವರು ಸರ್ಕಾರದ ನಡವಳಿಕೆ ಪ್ರಶ್ನಿಸಿದನ್ನು ಸ್ವಾಗತಿಸಿದ್ದಾರೆ. ಉತ್ಸವಕ್ಕೆ ಶಾಸಕರನ್ನು ಸಹ ಕರೆಯದೇ ಉತ್ಸವ ಮಾಡಿದನ್ನು ಖಂಡಿಸಿದ್ದಾರೆ.
`ಜನಪ್ರತಿನಿಧಿಯನ್ನು ಸರ್ಕಾರ ಹಾಗೂ ಸಚಿವರು ಅಷ್ಟು ತುಚ್ಚವಾಗಿ ನಡೆಸಿಕೊಳ್ಳಬಾರದು. ಕರಾವಳಿ ಉತ್ಸವಕ್ಕೆ ಹಣ ಕೊಟ್ಟ ರೀತಿ ಶಿರಸಿ ಜಾತ್ರೆಗೂ ಕೊಡಬೇಕು. ಜಾತ್ರೆಯ ಒಳಗೆ ಈ ಸಲದ ಜಾತ್ರಾ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಶಾಸಕ ಭೀಮಣ್ಣ ಜನರ ಸ್ವಾಭಿಮಾನ ಎತ್ತಿ ಹಿಡಿಯುವ ಕಾರ್ಯ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ. ಆ ಮೂಲಕ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ನಿಮ್ಮ ತಾಕತ್ತನ್ನು ತೋರಿಸಬೇಕು’ ಎಂದು ಹೇಳಿದ್ದಾರೆ.