ಕುಮಟಾದ ಮೆಹ್ರಾನ್ ಶಾಬಂದ್ರಿ ಅವರು ಸಾಮಾಜಿಕ ಜಾಲತಾಣದಲ್ಲಿ 18 ನಕಲಿ ಖಾತೆ ಹೊಂದಿದ್ದು, ಆ ಖಾತೆಗಳ ಮೂಲಕ ಮಹಿಳೆಯರಿಗೆ ಕೆಟ್ಟ ಕೆಟ್ಟ ಮೆಸೆಜ್ ಮಾಡಿ ಸಿಕ್ಕಿ ಬಿದ್ದಿದ್ದಾರೆ. ಭಟ್ಕಳದ ಪಾತಿಮಾ ಸಿದ್ಧಿಕಾ ಅವರಿಗೆ ಕಾಡಿಸದ ಆರೋಪದ ಅಡಿ ಪೊಲೀಸರು ಮೆಹ್ರಾನ್ ಶಾಬಂದ್ರಿ ಅವರನ್ನು ಬಂಧಿಸಿದ್ದಾರೆ.
ಹೊನ್ನಾವರದ ಮಂಕಿಯ ಮೆಹ್ರಾನ್ ಮೆಹ್ತಾಬ್ ಶಾಬಂದ್ರಿ (19) ಅವರು ಕುಮಟಾದ ತುಳಸಿಕಟ್ಟೆಯ ಬಳಿ ವಾಸವಾಗಿದ್ದರು. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿರುವ ಅವರು ಎಲ್ಲಿ ಯಾರದೇ ಮದುವೆ ಇದ್ದರೂ ಅಲ್ಲಿ ಹಾಜರಾಗುತ್ತಿದ್ದರು. ಮದುವೆಗೆ ಆಮಂತ್ರಣ ಇಲ್ಲದಿದ್ದರೂ ಅಲ್ಲಿ ಹೋಗಿ ಫೋಟೋ ಕ್ಲಿಕ್ಕಿಸುತ್ತಿದ್ದರು. ನಂತರ ಆ ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ಮಹಿಳೆಯರಿಗೆ ಮೆಸೆಜ್ ಮಾಡುತ್ತಿದ್ದರು. ಅಶ್ಲೀಲ ಮೆಸೆಜ್ ಕಳುಹಿಸಿ ಬೆದರಿಕೆಯನ್ನು ಒಡ್ಡುತ್ತಿದ್ದರು. ತಮ್ಮ ಈ ಕೆಟ್ಟ ಚಟಕ್ಕಾಗಿಯೇ ಮೆಹ್ರಾನ್ ಶಾಬಂದ್ರಿ ಇನಸ್ಟಾಗ್ರಾಂ ಸೇರಿ ವಿವಿಧ ಕಡೆ 18 ನಕಲಿ ಜಾಲತಾಣ ಖಾತೆಗಳನ್ನು ಹೊಂದಿದ್ದರು.
ಅಪರಿಚಿತ ವ್ಯಕ್ತಿಗಳ ವಿವಾಹ ಸಮಾರಂಭಗಳಲ್ಲಿ ತಮ್ಮ ಮೊಬೈಲ್ ಬಳಸಿ ಮಹಿಳೆಯರ ಫೋಟೋ ತೆಗೆಯುವ ಮೆಹ್ರಾನ್ ಶಾಬಂದ್ರಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಭಟ್ಕಳದ ಪಾತಿಮಾ ಸಿದ್ಧಿಕಾ ಅವರ ಕುಟುಂಬದ ಮದುವೆಗೆ ಹೋಗಿದ್ದ ಆರೋಪಿ ಪಾತಿಮಾ ಸಿದ್ಧಿಕಾ ಅವರ ಫೋಟೋಗಳನ್ನು ಕದ್ದು ತೆಗೆದಿದ್ದರು. ನಂತರ ಜಾಲತಾಣದ ಮೂಲಕ ಪಾತಿಮಾ ಸಿದ್ಧಿಕಾ ಅವರ ಸ್ನೇಹ ಮಾಡಿ, ಇನ್ನಷ್ಟು ಖಾಸಗಿ ಫೋಟೋಗಳನ್ನುಪಡೆದಿದ್ದರು.
ನಂತರ ಆ ಎಲ್ಲಾ ಫೋಟೋ ಬಳಸಿ ಜಾಲತಾಣದಲ್ಲಿ ಅಶ್ಲೀಲ ಬರಹಗಳ ಜೊತೆ ಪೋಸ್ಟ್ ಮಾಡಿದ್ದರು. ಮೆಹ್ರಾನ್ ಶಾಬಂದ್ರಿ ಕಾಟ ಸಹಿಸದೇ ಪಾತಿಮಾ ಸಿದ್ಧಿಕಾ ಅವರು ತಮ್ಮ ಜಾಲತಾಣದ ಸಹವಾಸದಿಂದ ದೂರ ಸರಿದರೂ ಸಹ ಮೆಹ್ರಾನ್ ಶಾಬಂದ್ರಿ ಸುಮ್ಮನಿರಲಿಲ್ಲ. ಈ ಹಿನ್ನಲೆ ಮೆಹ್ರಾನ್ ಶಾಬಂದ್ರಿ ವಿರುದ್ಧ ಪಾತಿಮಾ ಸಿದ್ಧಿಕಾ ಅವರು ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದರು. ವಿಚಾರಣೆ ವೇಳೆ ಮೆಹ್ರಾನ್ ಶಾಬಂದ್ರಿ ಅನೇಕರಿಗೆ ನಗ್ನ ಫೋಟೋ ಕಳುಹಿಸುವಂತೆ ದುಂಬಾಲು ಬಿದ್ದಿರುವುದು ಬೆಳಕಿಗೆ ಬಂದಿದೆ.