`ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಅರಣ್ಯ ಭೂಮಿ ಸಾಗುವಳಿದಾರರಿದ್ದು, ಅವರಿಗೆ ಸಿಗಬೇಕಾದ ಹಕ್ಕು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ ಷರತ್ತು ಮೂಲಕ ವಂಚಿಸುತ್ತಿದೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಅವರು ದೂರಿದ್ದಾರೆ. `ಈ ನಡೆ ವಿರೋಧಿಸಿ ರಾಜ್ಯದ ಎಲ್ಲಡೆ ಪ್ರತಿಭಟಿಸುತ್ತೇವೆ’ ಎಂದು ಅವರು ಎಚ್ಚರಿಸಿದ್ದಾರೆ.
ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ 6ನೇ ರೈತ ಸಮ್ಮೇಳನದಲ್ಲಿ ಮಾತನಾಡಿದ ಅವರು `ಅತಿಕ್ರಮಣದಾರರಿಗೆ ಹಕ್ಕು ನೀಡಲು ಸರ್ಕಾರ ಅನಗತ್ಯ ದಾಖಲೆಗಳನ್ನು ಕೇಳುತ್ತಿದೆ. ಅರಣ್ಯ ಭೂಮಿ ಹಕ್ಕು ಪ್ರತಿಯೊಬ್ಬ ಅರ್ಜಿದಾರರಿಗೂ ಸಿಗಬೇಕು. ಗ್ರಾಮ ಅರಣ್ಯ ಹಕ್ಕು ಸಮಿತಿ ಅನುಮೋದನೆಯೇ ಅಂತಿಮ ವಾಗಿದ್ದು ಅದನ್ನು ಪರಿಗಣಿಸಬೇಕು’ ಎಂದು ಆಗ್ರಹಿಸಿದರು. `ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ಮಾರಕವಾದ ನದಿ ಜೋಡಣೆ ಕೈಬಿಡಬೇಕು’ ಎಂದು ಒತ್ತಾಯಿಸಿದರು. `ಕುಣಬಿ, ಹಾಲಕ್ಕಿ, ಗೌಳಿ, ಕುಂಬ್ರಿ ಮರಾಠಿ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸಲು ರೈತ ಸಂಘ ಹೋರಾಟ ನಡೆಸುತ್ತದೆ’ ಎಂದರು.
ಸಿಐಟಿಯು ಜಿಲ್ಲಾ ಅಧ್ಯಕ್ಷ ತಿಲಕ್ ಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ಪ್ರಮುಖರಾದ ವೀರೇಶ ರಾಠೋಡ, ಶ್ಯಾಮನಾಥ ನಾಯ್ಕ, ಗೌರೀಶ ನಾಯಕ ತಿಮ್ಮಪ್ಪ ಗೌಡ, ಪ್ರೇಮಾನಂದ ವೇಳಿಪ್, ಸಂತೋಷ ನಾಯ್ಕ, ಪ್ರೇಮಾ ಉಳಗೇಕರ ವೇದಿಕೆ ಕಾರ್ಯಕ್ರಮ ನಿರ್ವಹಿಸಿದರು. ಫೆಬ್ರವರಿ 12ರಂದು ಕಾರ್ಮಿಕ ಕಾನೂನು ತಿದ್ದುಪಡಿ, ರೇಗಾ ತಿದ್ದುಪಡಿ, ಬೀಜ ಕಾಯ್ದೆ ತಿದ್ದುಪಡಿ ವಿರುದ್ಧ ನಡೆಯುವ ಅಖಿಲ ಭಾರತ ಮುಷ್ಕರ ಬೆಂಬಲಿಸಲು ಈ ಸಮ್ಮೇಳನ ನಿರ್ಣಯ ಕೈಗೊಳ್ಳಲಾಯಿತು.
ಪದಾಧಿಕಾರಿಗಳ ಮರು ಆಯ್ಕೆ
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮ್ಮೇಳನದಲ್ಲಿ ರೈತ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶಾಂತಾರಾಮ ನಾಯಕ ಮತ್ತು ಕಾರ್ಯದರ್ಶಿಯಾಗಿ ಶ್ಯಾಮನಾಥ ನಾಯ್ಕ ಪುನರಾಯ್ಕೆ ಆದರು. ಸಂಘಟನೆ ಉಪಾಧ್ಯಕ್ಷರಾಗಿ ತಿಮ್ಮಪ್ಪ ಗೌಡ ಹೊನ್ನಾವರ, ಗೌರೀಶ ನಾಯಕ ಅಂಕೋಲಾ, ಸಹಕಾರ್ಯದರ್ಶಿಗಳಾಗಿ ರಾಜೇಶ್ ಗಾವಡಾ ಜೋಯಡಾ ಮತ್ತು ಸಂತೋಷ ನಾಯ್ಕ ಅಂಕೋಲಾ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ರಮಾನಂದ ನಾಯಕ ಅಚವೆ, ಗಣೇಶ ಪಟಗಾರ, ಮಂಜುನಾಥ ಶೆಟ್ಟಿ ಹೊನ್ನಾವರ, ಶಂಕರ್ ಗೌಡ ಹಳದಿಪುರ, ಜೂಲಿ ಬ್ರೀಟ್ಟೊ ಕಾರವಾರ, ಮೋಹಿನಿ ನಮಸೇಕರ ಬೈರಾ, ಬುಜಂಗ್ ಚಿಬ್ಲಕರ್ ಹಳಿಯಾಳ , ಸಹದೇವ ಹಳಿಯಾಳ, ನಾಗಪ್ಪ ಸಿದ್ದಿ ಯಲ್ಲಾಪುರ, ಸಂತೋಷ ನಾಯ್ಕ ಜರಡಿ, ಪುಂಡಲೀಕ ನಾಯ್ಕ ಭಟ್ಕಳ ಆಯ್ಕೆಯಾದರು.