ಹೊನ್ನಾವರದ ರಾಮತೀರ್ಥದ ಬಳಿ ಸಿಪ್ರಿನ್ ಪೋಸ್ಗೆ, ಸಯ್ಯದ್ ಗುಲ್ಜಾರ್ ಹಾಗೂ ಅರ್ಬು ಸೇರಿ ಗಾಂಜಾ ಮಾರಾಟ ಮಾಡಿದ್ದಾರೆ. ನಿಷೇಧಿತ ವಸ್ತು ಮಾರಾಟದಿಂದ 3 ಸಾವಿರ ರೂ ಸಂಪಾದಿಸಿದ ಅವರು ಇನ್ನಷ್ಟು ಹಣಗಳಿಸುವ ಹಪಾಹಪಿಗೆ ಬಿದ್ದು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ.
ಹೊನ್ನಾವರ ಕಾಸರಕೋಡುವಿನ ಸಿಪ್ರಿನ್ ಯೂಸಿಪ್ ಪೋಸ್ಗೆ ಅವರು ಮೀನುಗಾರಿಕೆ ಮಾಡಿಕೊಂಡಿದ್ದರು. 27ನೇ ವಯಸ್ಸಿನಲ್ಲಿಯೇ ಅವರು ಅಡ್ಡದಾರಿ ಹಿಡಿದಿದ್ದು, ಗಾಂಜಾ ಮಾರಾಟದಿಂದ ದುಡ್ಡು ಮಾಡಲು ಯೋಚಿಸಿದರು. ಹೊನ್ನಾವರದ ಪ್ರಭಾತ ನಗರ ಪಾರೆಸ್ಟ್ ಕಾಲೋನಿಯಲ್ಲಿ ವಾಸವಾಗಿರುವ ಸಯ್ಯದ್ ಗುಲ್ಜಾರ್ ಸಯ್ಯದ್ ಮುಕ್ತಾರ್ ಅವರು 22ನೇ ವಯಸ್ಸಿನಲ್ಲಿಯೇ ದಾರಿ ತಪ್ಪಿದ್ದರು. ಸೂಪರ್ ಮಾರ್ಟಿನಲ್ಲಿ ಕೆಲಸ ಮಾಡುವ ಸಯ್ಯದ್ ಗುಲ್ಜಾರ್ ಆ ಕೆಲಸದ ಜೊತೆ ಅಕ್ರಮ ಕೂಟದಲ್ಲಿ ಸಿಪ್ರಿನ್ ಪೋಸ್ಗೆ ಸಹಚರರಾಗಿದ್ದು, ಕುಮಟಾದ ಅರ್ಬು ಎಂಬಾತರ ಜೊತೆ ಸೇರಿ ಅವರೆಲ್ಲರೂ ಗಾಂಜಾ ವ್ಯಾಪಾರ ಶುರು ಮಾಡಿದರು.
ಜನವರಿ 19ರ ರಾತ್ರಿ ರಾಮತೀರ್ಥದ ಕ್ರಾಸಿನ ಬಳಿ ಆ ಮೂವರು ಒಂದೇ ಬೈಕಿನಲ್ಲಿ ಓಡಾಡುತ್ತಿದ್ದರು. ಅಲ್ಲಿ ಬರುವ ಜನರನ್ನು ಮಾತನಾಡಿಸಿ ಹಣಪಡೆದು ಗಾಂಜಾ ಕೊಡುತ್ತಿದ್ದರು. ಮೂರು ಸಾವಿರ ರೂ ಸಂಪಾದಿಸಿದ್ದ ಆ ಮೂವರು ಮತ್ತೆ 6 ಸಾವಿರ ಸಂಪಾದನೆಗಾಗಿ ಗಿರಾಕಿ ಹುಡುಕುತ್ತಿದ್ದರು. ಹೊನ್ನಾವರ ಪಿಐ ಸಿದ್ದರಾಮೇಶ್ವರ ಎಸ್ ಅವರು ಆ ಮೂವರನ್ನು ನೋಡಿದರು. ಪೊಲೀಸರನ್ನು ಕಂಡ ತಕ್ಷಣ ಕುಮಟಾದ ಅರ್ಬು ಅಲ್ಲಿಂದ ಓಡಿ ಪರಾರಿಯಾದರು.
ಸಿಪ್ರಿನ್ ಪೋಸ್ಗೆ ಹಾಗೂ ಸಯ್ಯದ್ ಗುಲ್ಜಾರ್ ಅವರ ಬಳಿ ಬಿಳಿ ಮತ್ತು ಕೆಂಪು ಕೊಟ್ಟೆಯಲ್ಲಿ ಗಾಂಜಾ ಕಾಣಿಸಿತು. 106 ಗ್ರಾಂ ಗಾಂಜಾ ವಶಕ್ಕೆಪಡೆದ ಪೊಲೀಸರು ಅವರಿಬ್ಬರನ್ನು ಬಂಧಿಸಿದರು. ಜೊತೆಗೆ ಮೂವರ ಹೆಸರನ್ನು ನಮೂದಿಸಿ ಪ್ರಕರಣ ದಾಖಲಿಸಿದ್ದು, ಗಾಂಜಾ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸಿದರು. ಬಂಧಿತರಿoದ ಮೊಬೈಲ್ ಹಾಗೂ ಬೈಕನ್ನು ಜಪ್ತು ಮಾಡಿದರು.
`ಮಾದಕ ವ್ಯಸನ ಜೀವನಕ್ಕೆ ಮಾರಕ’