ಕುಮಟಾ ಕಲ್ಲಬ್ಬೆ ಬಳಿಯ ಬೋಗ್ರಿಬೈಲ್ ಬಳಿ ಅಘನಾಶಿನಿ ನದಿಗೆ ಅಡ್ಡಲಾಗಿ ಸರ್ಕಾರ ಸೇತುವೆ ನಿರ್ಮಿಸಿದೆ. ಹೀಗಾಗಿ ಇನ್ಮುಂದೆ ಶಿರಸಿ-ಹೊನ್ನಾವರ ಪ್ರಯಾಣ ಇನ್ನಷ್ಟು ಹತ್ತಿರವಾಗಲಿದೆ.
ಹೊನ್ನಾವರ ಕಡೆಯಿಂದ ಶಿರಸಿ ಕಡೆಗೆ ಹಾಗೂ ಶಿರಸಿ ಕಡೆಯಿಂದ ಹೊನ್ನಾವರ ಕಡೆಗೆ ಪ್ರಯಾಣಿಸುವವರು ಈ ಸೇತುವೆ ಮಾರ್ಗ ಬಳಸಿದರೆ ಕುಮಟಾ ಪಟ್ಟಣಕ್ಕೆ ಪ್ರವೇಶಿಸಬೇಕಿಲ್ಲ. ಇದರಿಂದ ವಾಹನ ಸವಾರರಿಗೆ ಸರಿ ಸುಮಾರು 15ಕಿಮೀ ಉಳಿತಾಯವಾಗಲಿದೆ.
2018ರಲ್ಲಿ ಕುಮಟಾ ಶಾಸಕರಾಗಿದ್ದ ಶಾರದಾ ಶೆಟ್ಟಿ ಅವರು ಈ ಸೇತುವೆ ಮಂಜೂರಿ ಮಾಡಿಸಿದ್ದರು. ಆದರೆ, ಗುತ್ತಿಗೆದಾರರಿಗೆ ಹಣ ಪಾವತಿ ಆಗದ ಕಾರಣ ಸೇತುವೆ ಪೂರ್ಣವಾಗಿರಲಿಲ್ಲ. ಈಗಿನ ಶಾಸಕ ದಿನಕರ ಶೆಟ್ಟಿ ಈ ವಿಷಯವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಾಸ್ತಾಪಿಸಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದರು. ಅದರ ಪರಿಣಾಮ ಸೇತುವೆ ಕೆಲಸ ಮುಗಿದಿದ್ದು, ಹೊನ್ನಾವರ ಕತಗಾಲ ರಸ್ತೆಯಲ್ಲಿ ಅಘನಾಶಿನಿ ನದಿಗೆ ಅಡ್ಡವಾಗಿ 23 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ಕಾಣಿಸಿತು.
ಮಂಗಳವಾರ ಈ ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಉದ್ಘಾಟಿಸಿದರು. ಶಾಸಕ ದಿನಕರ ಶೆಟ್ಟಿ ಅವರ ಜೊತೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರು ಸಹ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸೇತುವೆ ಮಾಡಿಕೊಟ್ಟ ಕಾರಣ ಮಂಕಾಳು ಎಸ್ ವೈದ್ಯ, ದಿನಕರ ಶೆಟ್ಟಿ ಹಾಗೂ ಶಾರದಾ ಮೋಹನ ಶೆಟ್ಟಿ ಅವರಿಗೆ ಜನ ಸನ್ಮಾನಿಸಿದರು. ಕತಗಾಲ್-ಹೊನ್ನಾವರ ರಸ್ತೆಯನ್ನು ಅಗಲೀಕರಣಗೊಳಿಸುವಂತೆ ವಕೀಲ ಜಯಂತ ನಾಯ್ಕ ಮನವಿ ಸಲ್ಲಿಸಿದರು.
ಪ್ರಮುಖರಾದ ರವಿ ಹೆಗಡೆ, ಟಿ ಬಿ ಹೆಗಡೆ, ಸುಬ್ರಹ್ಮಣ್ಯ ಭಟ್, ಗಜಾನನ ಕೋಡಿಯಾ, ವಸಂತ ಶೆಟ್ಟಿ, ಸಿ ಜಿ ಹೆಗಡೆ, ಮಂಜುನಾಥ ನಾಯ್ಕ, ಗೋಪಾಲ ನಾಯ್ಕ ಇತರರು ಇದ್ದರು. ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ಕಲ್ಲಬ್ಬೆ ಗ್ರಾಪಂ ಅಧ್ಯಕ್ಷೆ ಕಮಲ ನಾಗರಾಜ ಮುಕ್ರಿ, ಮೂರೂರು ಗ್ರಾಪಂ ಅಧ್ಯಕ್ಷೆ ಭಾರತಿ ನಾಯ್ಕ, ಮಾಜಿ ಅಧ್ಯಕ್ಷೆ ಶೋಭಾ ನಾಯ್ಕ, ಮುಖಂಡರಾದ ರತ್ನಾಕರ ನಾಯ್ಕ, ಭಾಸ್ಕರ ಪಟಗಾರ, ವೈಭವ ನಾಯ್ಕ, ಪ್ರಮುಖರಾದ ಚಂದ್ರಾಸ ನಾಯ್ಕ, ಮೈಕಲ್ ಫರ್ನಾಂಡೀಸ್, ವಿನಾಯಕ ಅಂಬಿಗ ಸಹ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.