ಉತ್ತರ ಕನ್ನಡದ ನದಿ ಉಳಿವಿಗೆ ಜನ ಹೋರಾಟ ನಡೆಸುತ್ತಿದ್ದು, ಮರಳು ದಂಧೆಕೋರರು ನದಿ ಆಳವನ್ನು ಅಗೆದು ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ. ಈ ವಿಷಯ ಅರಿತ ಹೊನ್ನಾವರ ತಹಶೀಲ್ದಾರ್ ನದಿ ಅಂಚಿನ ಪ್ರದೇಶಕ್ಕೆ ದಿಢೀರ್ ಭೇಟಿ ನೀಡಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಜಪ್ತು ಮಾಡಿದ್ದಾರೆ.
ಶರಾವತಿ ನದಿಯ ಬಳ್ಕೂರಿನಲ್ಲಿ ಅಪಾರ ಪ್ರಮಾಣದಲ್ಲಿ ಮರಳು ತೆಗೆಯಲಾಗುತ್ತಿದೆ. ನದಿ ಹಾಗೂ ಪರಿಸರಕ್ಕೆ ಅಪಾಯ ಆಗುವ ರೀತಿ ಮರಳು ದಂಧೆ ನಡೆಯುತ್ತಿದೆ. ಮನೆ ನಿರ್ಮಾಣಕ್ಕೆ ಬಳ್ಕೂರು ರೇತಿಗೆ ಅಪಾರ ಬೇಡಿಕೆಯಿದ್ದು, ಅದೇ ಹಿನ್ನಲೆ ದುರುಪಯೋಗಪಡಿಸಿಕೊಂಡು ಮರಳು ಮಾಫಿಯಾ ನಡೆಯುತ್ತಿದೆ. ದಂಧೆಕೋರರು ತೆಗೆದ ಮರಳನ್ನು ನದಿ ಅಂಚಿನಲ್ಲಿ ಗುಡ್ಡೆ ಹಾಕಿ ದಾಸ್ತಾನು ಮಾಡಿದ್ದು, ಅದನ್ನು ದುಪ್ಪಟ್ಟು ಬೆಲೆಗೆ ವಿವಿಧ ಕಡೆ ಸಾಗಿಸುತ್ತಿದ್ದಾರೆ.
ಅಕ್ರಮ ಮರಳುಗಾರಿಕೆ ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂಬ ಆರೋಪವ್ಯಕ್ತವಾಗಿದ್ದು, ಅದರ ಬೆನ್ನಲ್ಲೆ ಅಧಿಕಾರಿಗಳು ಮರಳು ಅಡ್ಡೆಯ ಮೇಲೆ ದಾಳಿ ಮಾಡಿದ್ದಾರೆ. ಮಂಗಳವಾರ ಶರಾವತಿ ನದಿ ತೀರದ ಬಳಿ ದಾಸ್ತಾನು ಮಾಡಿದ್ದ 20 ಲೋಡ್ ಮರಳನ್ನು ಅಧಿಕಾರಿಗಳು ವಶಕ್ಕೆಪಡೆದಿದ್ದಾರೆ. ಹೊನ್ನಾವರ ತಹಶೀಲ್ದಾರ್ ಪ್ರವೀಣ ಕರಾಂಡೆ ಮರಳು ಅಡ್ಡೆ ಪ್ರದೇಶಕ್ಕೆ ತೆರಳಿದ್ದಾರೆ. ಅಲ್ಲಿದ್ದ 70 ಬರಾಸ್ ಮರಳನ್ನು ಜಪ್ತು ಮಾಡಿದ್ದಾರೆ. ಪೊಲೀಸ್ ಸುಪರ್ಧಿಯಲ್ಲಿ ಆ ಮರಳನ್ನು ಗ್ರಾಮ ಪಂಚಾಯತ ವಶಕ್ಕೆ ಹಸ್ತಾಂತರಿಸಿದ್ದಾರೆ.