ಹಕ್ಕಿನ ಜಮೀನಿನ ಬಗ್ಗೆ ಕೋರ್ಟಿನಲ್ಲಿ ಕೇಸು ಹಾಕಿದ ಕಾರಣ ಕುಮಟಾದ ಮಾರುತಿ ಹೆಗಡೆ ಅವರ ಕೊಲೆಯಾಗಿದೆ. ಜಮೀನು ಖರೀದಿಸಿದ್ದ ನಾಗಪ್ಪ ಗೌಡ ಅವರು ಮಾರುತಿ ಹೆಗಡೆ ಅವರ ಮೇಲೆ ಹಲ್ಲೆ ನಡೆಸಿ, ಅವರ ಸಾವಿಗೆ ಕಾರಣರಾಗಿದ್ದಾರೆ.
ಕುಮಟಾದ ಕೂಜಳ್ಳಿಯ ಮೇಣಸಿನಕೇರಿಯಲ್ಲಿ ಮಾರುತಿ ಬೀರಾ ಹೆಗಡೆ ಅವರು ವಾಸವಾಗಿದ್ದರು. ಅವರಿಗೆ ಪತ್ನಿ ತವರು ಮನೆ ಭೂಮಿ ಮೇಲೆ ಮನಸ್ಸಿತ್ತು. ಆದರೆ, ಮಾರುತಿ ಹೆಗಡೆ ಅವರ ಭಾವ ಅನಂತ ಈಶ್ವರ ಹೆಗಡೆ ಅವರು 1 ಎಕರೆ ಭೂಮಿಯನ್ನು ಮೇಲಿನ ಕೂಜಳ್ಳಿಯ ನಾಗಪ್ಪ ಜಟ್ಟು ಗೌಡ ಅವರಿಗೆ ಮಾರಾಟ ಮಾಡಿದ್ದರು. ಈ ಮಾರಾಟ ಸಹಿಸದ ಮಾರುತಿ ಹೆಗಡೆ ಅವರು ಜಮೀನು ಹಕ್ಕಿನ ವಿಷಯವಾಗಿ ಕೋರ್ಟಿನಲ್ಲಿ ಕೇಸು ಹಾಕಿದ್ದರು.
ಜಮೀನು ಖರೀದಿಸಿ ಕೇಸು ಎದುರಿಸಬೇಕಾದ ಪರಿಸ್ಥಿತಿ ಬಂದಿದ್ದರಿoದ ನಾಗಪ್ಪ ಗೌಡ ಅವರು ಸಿಟ್ಟಾಗಿದ್ದರು. ಕೇಸು ದಾಖಲಿಸಿದ ಮಾರುತಿ ಹೆಗಡೆ ಅವರ ವಿರುದ್ಧ ನಾಗಪ್ಪ ಗೌಡ ಅವರು ದ್ವೇಷ ಹೊಂದಿದ್ದರು. ಜನವರಿ 17ರ ಸಂಜೆ ಮಾರುತಿ ಗೌಡ ಅವರು ತಮ್ಮ ಮನೆ ಮುಂದೆ ನಿಂತಾಗ ಅಲ್ಲಿ ನಾಗಪ್ಪ ಗೌಡ ಅವರು ಬಂದರು. ಕೇಸಿನ ವಿಷಯವಾಗಿ ಜಗಳ ಶುರು ಮಾಡಿದರು.
ಆ ಜಗಳ ದೊಡ್ಡದಾಗಿದ್ದು, ಅವರಿಬ್ಬರ ನಡುವೆ ಗಲಾಟೆ ನಡೆಯಿತು. ಆ ಗಲಾಟೆಯಲ್ಲಿ ನಾಗಪ್ಪ ಗೌಡ ಅವರು ಮಾರುತಿ ಹೆಗಡೆ ಅವರ ಹೊಟ್ಟೆಗೆ ಒದ್ದರು. ತಮ್ಮ ಕೈಯಿಂದ ಹಿಗ್ಗಾಮುಗ್ಗ ಥಳಿಸಿದರು. ಪರಿಣಾಮ ಮಾರುತಿ ಹೆಗಡೆ ಅವರು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ತಂದೆಯ ಸಾವಿನ ಬಗ್ಗೆ ಚೇತನಾ ಹೆಗಡೆ ಅವರು ಮಾಹಿತಿ ನೀಡಿದರು. ಕೊಲೆ ಮಾಡಿದ ನಾಗಪ್ಪ ಗೌಡ ಅವರನ್ನು ಶಿಕ್ಷಿಸುವಂತೆ ಪೊಲೀಸ್ ದೂರು ನೀಡಿದರು.