`ಕುಡಿಯುವ ಯೋಜನೆ ಹೆಸರಿನಲ್ಲಿ ಸರ್ಕಾರ ನದಿ ತಿರುವು ಯೋಜನೆಗೆ ಮುಂದಾಗಿದ್ದು, ವಾಸ್ತವವಾಗಿ ಅದು ಕುಡಿಯುವ ನೀರಿನ ಯೋಜನೆಯೇ ಅಲ್ಲ’ ಎಂದು ಶಿರಸಿಯ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ. ಸರ್ಕಾರಿ ದಾಖಲೆಗಳ ಪ್ರಕಾರ `ರಾಯಚೂರು ಜಿಲ್ಲೆಗೆ ನೀರಾವರಿ’ ಎಂಬ ಹೆಸರಿನಲ್ಲಿ ಈ ಯೋಜನೆಯಿರುವ ಆಘಾತಕಾರಿ ಅಂಶವನ್ನು ಅವರು ಬಿಚ್ಚಿಟ್ಟಿದ್ದಾರೆ.
`ಬೇಡ್ತಿ-ವರದಾ ನದಿ ತಿರುವು ಯೋಜನೆಯನ್ನು ಹಾವೇರಿ ಭಾಗದ ಜನರ ಕುಡಿಯುವ ನೀರಿಗಾಗಿ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ. ಸರ್ಕಾರದ ವೆಬ್ ಸೈಟಿನಲ್ಲಿಯೇ ಆ ಯೋಜನೆಗೆ ರಾಯಚೂರು ಜಿಲ್ಲೆಗೆ ನೀರಾವರಿ ಎಂದು ವಿವರ ನೀಡಲಾಗಿದೆ. ರಾಯಚೂರಿಗೆ ನೀರು ಬೇಕಾದರೆ ಹಾವೇರಿ ಜನ ಹೋರಾಟ ಮಾಡುವುದರ ಹಿಂದೆ ಬೇರೆ ಹುನ್ನಾರವೇ ಅಡಗಿದೆ’ ಎಂದು ಅನಂತಮೂರ್ತಿ ಹೆಗಡೆ ಅನುಮಾನವ್ಯಕ್ತಪಡಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹೀಗಿರುವಾಗ ಅಂತ ಯೋಜನೆ ಮಾಡುವುದೇ ಅವೈಜ್ಞಾನಿಕ’ ಎಂದವರು ಹೇಳಿದ್ದಾರೆ. `ಸ್ವರ್ಣವಲ್ಲಿ ಶ್ರೀಗಳು ಯಾವುದೇ ಸ್ವಾರ್ಥ ಇಲ್ಲದೇ ಯೋಜನೆ ವಿರುದ್ಧ ಹೋರಾಟ ನಡೆಸಿದ್ದಾರೆ. ಅದಕ್ಕೆ ಎಲ್ಲರೂ ಕೈ ಜೋಡಿಸಬೇಕು’ ಎಂದವರು ಮನವಿ ಮಾಡಿದ್ದಾರೆ. `ಈ ಯೋಜನೆ ಮೂಲಕ 50ಕ್ಕೂ ಅಧಿಕ ಹಳ್ಳಿಗಳು ನಾಶವಾಗಲಿದೆ. ನದಿ ನಂಬಿ ನಡೆಯುವ ಪ್ರವಾಸೋದ್ಯಮ ಚಟುವಟಿಕೆಗಳು ನಶಿಸಲಿದೆ’ ಎಂದು ನಿವೃತ್ತ ಲೋಕೋಪಯೋಗಿ ಅಧಿಕಾರಿ ವಿ ಎಂ ಭಟ್ಟ ಅವರು ಹೇಳಿದ್ದಾರೆ.
`ನದಿ ನೀರಿನ ಬಳಕೆ ಪೂರ್ಣ ಪ್ರಮಾಣದಲ್ಲಿ ನಡೆಯಬೇಕು. ಉಳಿದರೆ ಮಾತ್ರ ಹೊರ ಜಿಲ್ಲೆಗೆ ನೀಡಬೇಕು. ಈ ಬಗ್ಗೆ ತಜ್ಞರೆಲ್ಲರೂ ಸೇರಿ ಯೋಜನಾ ವರದಿ ತಯಾರಿಸಬೇಕು’ ಎಂದು ಜಿ ಪಂ ಮಾಜಿ ಸದಸ್ಯ ಹಾಲಪ್ಪ ಅವರು ಹೇಳಿದ್ದಾರೆ. `ನಮ್ಮದೆಲ್ಲವನ್ನು ಬೇರೆಡೆ ಕೊಟ್ಟು ನಾವು ಬದುಕುವುದು ಹೇಗೆ?’ ಎಂದು ಅವರು ಪ್ರಶ್ನಿಸಿದ್ದಾರೆ.