ಯಲ್ಲಾಪುರ – ಅಂಕೋಲಾ ಗಡಿಯಲ್ಲಿರುವ ಹೆಗ್ಗಾರಿನಲ್ಲಿ ಕಳ್ಳತನ ನಡೆದಿದೆ. ಕಲ್ಪತರು ವಿವಿದೋದ್ದೇಶ ಸಂಘದ ಸೂಪರ್ ಮಾರ್ಟಿಗೆ ಕಳ್ಳರು ನುಗ್ಗಿದ್ದಾರೆ.
ಅಂಕೋಲಾ ತಾಲೂಕಿನ ಹೆಗ್ಗಾರಿನಲ್ಲಿರುವ ಕಲ್ಪತರು ವಿವಿದೋದ್ದೇಶ ಸಂಘದ ವಿವಿಧ ರೀತಿಯ ಸೇವೆ ನೀಡುತ್ತಿದೆ. ಸಹಕಾರಿ ವ್ಯವಸ್ಥೆಯ ಮುಖ್ಯ ಆಧಾರವನ್ನಾಗಿಸಿಕೊಂಡ ಈ ಸೊಸೈಟಿ ಮೂರು ಶಾಖೆಯನ್ನು ಹೊಂದಿದೆ. ಕೃಷಿ ಉಪಕರಣಗಳ ಮಾರಾಟ, ಬ್ಯಾಂಕಿoಗ್ ಹಾಗೂ ಸೂಪರ್ ಮಾರ್ಟ ನಡೆಸುತ್ತಿದೆ. ಜನರಿಗೆ ಅನುಕೂಲವಾಗುವ ವಿವಿಧ ಸೇವಾ ಕಾರ್ಯಗಳ ಜೊತೆ ಸರ್ಕಾರಿ ವಿಮಾ ಯೋಜನೆ ಹಾಗೂ ಪಡಿತರ ವಿತರಣೆ ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಅಡಿಕೆ ಸೇರಿ ವಿವಿಧ ಬೆಳೆಗಳಿಗೆ ಬರುವ ರೋಗದ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರ, ಕೃಷಿ ಸಾಧಕರಿಗೆ ಸನ್ಮಾನ ಸೇರಿ ವಿವಿಧ ಬಗೆಯ ಚಟುವಟಿಕೆಗಳಿಂದ ಸೊಸೈಟಿ ಪ್ರಸಿದ್ಧಿಪಡೆದಿದೆ. ಹೀಗಿರುವಾಗ ಆ ಸೊಸೈಟಿ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಸೂಪರ್ ಮಾರ್ಟಿಗೆ ನುಗ್ಗಿ ಕನ್ನ ಹಾಕಿದ್ದಾರೆ.
ಜನವರಿ 17ರ ಸಂಜೆ 6 ಗಂಟೆಗೆ ಸೊಸೈಟಿ ಸಿಬ್ಬಂದಿ ಸೂಪರ್ ಮಾರ್ಟ ಬಂದ್ ಮಾಡಿ ಮನೆಗೆ ಹೋಗಿದ್ದು, ಅದಾದ ನಂತರ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಹೆಗ್ಗಾರಿನಲ್ಲಿರುವ ಸೂಪರ್ ಮಾರ್ಟಿನ ಹಿಂದಿನ ಬಾಗಿಲಿಗೆ ರಂದ್ರ ಕೊರೆದ ಕಳ್ಳರು ಆ ರಂದ್ರದ ಮೂಲಕ ಬಾಗಿಲಿನ ದಂಡಿ ತೆಗೆದಿದ್ದಾರೆ. ಅದಾದ ಮೇಲೆ ಸುಲಭವಾಗಿ ಸೂಪರ್ ಮಾರ್ಟಿನ ಒಳಗೆ ನುಗ್ಗಿ ಅಲ್ಲಿದ್ದ ಡ್ರಾವರನ್ನು ಜಾಲಾಡಿದ್ದಾರೆ. ಅಲ್ಲಿದ್ದ 8 ಸಾವಿರ ರೂ ಎಗರಿಸಿ ಪರಾರಿ ಆಗಿದ್ದಾರೆ. ಜನವರಿ 19ರ ಬೆಳಗ್ಗೆ ಸಿಬ್ಬಂದಿ ಸೊಸೈಟಿ ಸೂಪರ್ ಮಾರ್ಟಿನ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಅಂಕೋಲಾದ ಕನಕನಳ್ಳಿಯಲ್ಲಿ ವಾಸವಾಗಿರುವ ಸೊಸೈಟಿಯ ಮುಖ್ಯಾಧಿಕಾರಿ ರಾಮಚಂದ್ರ ಮಹಾಬಲೇಶ್ವರ ಭಟ್ಟ ಅವರು ಈ ಬಗ್ಗೆ ಪೊಲೀಸರಿಗೆ ದೂರಿದ್ದಾರೆ. ಅನತಿ ದೂರದ ಇನ್ನೊಂದು ಸೊಸೈಟಿ ಹಾಗೂ ಶಾಲೆಯ ಮೇಲೆಯೂ ಕಳ್ಳರು ಕಣ್ಣು ಹಾಕಿದ್ದು, ಅಲ್ಲಿಯೂ ಸಣ್ಣಪುಟ್ಟ ಕಳ್ಳತನ ನಡೆದಿದೆ.
`ಕಳ್ಳತನ ತಡೆಗೆ ಸಿಸಿ ಕ್ಯಾಮರಾ ಸಹಕಾರಿ’