ಕುಮಟಾ ಮೂರೂರಿನ ಜಯರಾಮ ಭಟ್ಟರ ಮನೆ ಬಳಿಯಿರುವ ನಾಯಿಯೊಂದು ಬೈಕ್ ಸವಾರರನ್ನು ಬೆದರಿಸುತ್ತಿದೆ. ಆ ನಾಯಿ ಕಾಟಕ್ಕೆ ಕಂದವಳ್ಳಿಯ ಕೃಷ್ಣ ಭಟ್ಟರು ಬೈಕಿನಿಂದ ಬಿದ್ದಿದ್ದು, ಕೃಷ್ಣ ಭಟ್ಟರ ಪತ್ನಿ ಗೀತಾ ಭಟ್ಟ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಗಿದೆ.
ಕುಮಟಾ ಕಂದವಳ್ಳಿಯ ಕೃಷ್ಣ ಪರಮೇಶ್ವರ ಭಟ್ಟ ಅವರು ತಮ್ಮ 73ನೇ ವಯಸ್ಸಿನಲ್ಲಿಯೂ ವೇಗವಾಗಿ ಬೈಕ್ ಓಡಿಸುತ್ತಾರೆ. ಜನವರಿ 21ರ ಸಂಜೆ ಅವರು ಪತ್ನಿ ಗೀತಾ ಭಟ್ಟ ಅವರ ಜೊತೆ ಕುಮಟಾ ಕಡೆ ಹೊರಟಿದ್ದರು. ಕಂದವಳ್ಳಿಯಿoದ ಕುಮಟಾ ಕಡೆ ಹೊರಟಿದ್ದ ಅವರ ಬೈಕಿಗೆ ಮೂರೂರಿನ ಜಯರಾಮ ಭಟ್ಟರ ಮನೆ ಬಳಿ ನಾಯಿಯೊಂದು ಅಡ್ಡ ಬಂದಿತು.
ಏಕಾಏಕಿ ನಾಯಿ ಅಡ್ಡ ಬಂದಿದ್ದರಿAದ ಬೆದರಿದ ಕೃಷ್ಣ ಭಟ್ಟರು ಆ ಬೈಕು ನಾಯಿಗೆ ಗುದ್ದುವುದನ್ನು ತಪ್ಪಿಸಲು ಪ್ರಯತ್ನಿಸಿದರು. ನಾಯಿ ಬೈಕಿನಿಂದ ತಪ್ಪಿಸಿಕೊಂಡಿದ್ದು, ಕೃಷ್ಣ ಭಟ್ಟರು ಅವರ ಪತ್ನಿ ಗೀತಾ ಭಟ್ಟರ ಜೊತೆ ಕಂದಕಕ್ಕೆ ಬಿದ್ದರು. ಪರಿಣಾಮ ಗೀತಾ ಭಟ್ಟ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು. ಗೀತಾ ಭಟ್ಟ ಅವರ ಕೈಗೂ ನೋವಾಯಿತು.
ಈ ಅಪಘಾತದಲ್ಲಿ ಕೃಷ್ಣ ಭಟ್ಟರಿಗೂ ಅಲ್ಲಲ್ಲಿ ನೋವಾಗಿದ್ದು, ಅವರಿಬ್ಬರು ಹೊನ್ನಾವರದ ಸೆಂಟ್ ಇಗ್ನೇಶಿಯಸ್ ಆಸ್ಪತ್ರೆ ಸೇರಿದರು. ಮಾವನಿಗೆ ಅಪಘಾತ ಆಗಿರುವುದನ್ನು ಅರಿತು ಮೂರೂರಿನ ಅಮೋದ ವೆಂಕಟ್ರಮಣ ಹೆಗಡೆ ಅವರು ಆಸ್ಪತ್ರೆಗೆ ದೌಡಾಯಿಸಿದರು. ಈ ಅಪಘಾತದ ಬಗ್ಗೆ ಅವರೇ ಮಾಹಿತಿ ನೀಡಿ, ವೇಗವಾಗಿ ಬೈಕ್ ಓಡಿಸಿದ ಕೃಷ್ಣ ಭಟ್ಟರ ವಿರುದ್ಧ ಪೊಲೀಸ್ ದೂರು ನೀಡಿದರು.