ಕಾರವಾರದ ರಿಶೇಲ್ ಡಿಸೋಜಾ ಆತ್ಮಹತ್ಯೆ ಹಾಗೂ ಚಿರಾಗ ಕೋಠಾರಕರ್ ಪರಾರಿ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಯುವಕನೊಬ್ಬ ಪೊಲೀಸರ ಎದುರೇ ಕೈ ಕೊಯ್ದುಕೊಂಡಿದ್ದು, ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಹಾಗೂ ತಾಲೂಕು ಪಂಚಾಯತ ಮಾಜಿ ಸದಸ್ಯ ಚಂದ್ರಹಾಸ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಅವರ ಕಾಟ ಸಹಿಸಲಾಗದೇ ಕದ್ರಾ ಗ್ರಾ ಪಂಚಾಯತ ಸದಸ್ಯೆ ರೀನಾ ಡಿಸೋಜಾ ಅವರ ಪುತ್ರಿ ರಿಶೇಲ್ ಡಿಸೋಜಾ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣದ ಕಾವು ಏರಿದ್ದು, ಚಿರಾಗ ಕೋಠಾರಕರ್ ಬಂಧನಕ್ಕಾಗಿ ಪ್ರತಿಭಟನೆಗಳು ನಡೆದಿದ್ದವು.
ಕದ್ರಾ ಪಿಸೈ ಸುನೀಲ ಅವರು ಸಹ ಈ ಪ್ರಕರಣದಿಂದಾಗಿ ಅಮಾನತು ಆಗಿದ್ದರು. ಈ ಎಲ್ಲಾ ಹಿನ್ನಲೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿದ್ದು, ಪೊಲೀಸರು ವಿಚಾರಣೆಗಾಗಿ ಚಂದ್ರಹಾಸ ಕೋಠಾರಕರ್ ಅವರ ಕಚೇರಿಯಲ್ಲಿದ್ದ ರಾಹುಲ್ ಕೋಠಾರಕರ್ ಅವರನ್ನು ಕರೆಯಿಸಿದ್ದರು. ಪದೇ ಪದೇ ಪೊಲೀಸರ ಎದುರು ಹೇಳಿಕೆ ನೀಡುವುದನ್ನು ಸಹಿಸದ ರಾಹುಲ್ ಕೋಠಾರಕರ್ ಡಿವೈಎಸ್ಪಿ ಕಚೇರಿಯಲ್ಲಿಯೇ ತಮ್ಮ ಕೈ ಕೊಯ್ದುಕೊಂಡರು. ಬ್ಲೇಡಿನಿಂದ ಕೈಗೆ ಗಾಯ ಮಾಡಿಕೊಂಡಿದ್ದ ರಾಹುಲ್ ಕೋಠಾರಕರ್ ಅವರನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದರು. ಶುಕ್ರವಾರ ಸಂಜೆ ಆಸ್ಪತ್ರೆಯಲ್ಲಿದ್ದ ರಾಹುಲ್ ಕೋಠಾರಕರ್ ಶನಿವಾರ ಅಲ್ಲಿಂದ ಬಿಡುಗಡೆ ಆಗಿದ್ದಾರೆ.