ಚೆನೈಯಿಂದ ಗೋಕರ್ಣಕ್ಕೆ ಹೊರಟಿದ್ದ ಟೆಂಪೋ ಟ್ರಾವಲರ್ ಯಲ್ಲಾಪುರ ಅರಬೈಲ್ ಘಟ್ಟದಲ್ಲಿ ಪಲ್ಟಿಯಾಗಿದೆ. ಪರಿಣಾಮ 7 ಜನ ಗಾಯಗೊಂಡಿದ್ದಾರೆ.
ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಯೋಜನೆ ರೂಪಿಸಿದ್ದರು. ಅದರಂತೆ ಅವರು ಶನಿವಾರ ತಮ್ಮ ಪ್ರಯಾಣ ಶುರು ಮಾಡಿದ್ದರು. ಹುಬ್ಬಳ್ಳಿ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ ಆ ವಿದ್ಯಾರ್ಥಿಗಳು ಯಲ್ಲಾಪುರ ಮಾರ್ಗವಾಗಿ ಮುಂದೆ ಹೊರಟಿದ್ದರು. ಅರಬೈಲ್ ಘಟ್ಟ ಪ್ರದೇಶದ `S’ ಆಕಾರದ ತಿರುವಿನಲ್ಲಿ ಅವರಿದ್ದ ಟೆಂಪೋ ಟ್ರಾವೆಲರ್ ಚಾಲಕನ ನಿಯಂತ್ರಣ ತಪ್ಪಿತು. ಆ ವಾಹನ ಅಲ್ಲಿಯೇ ಪಲ್ಟಿಯಾಯಿತು.
ಕೊಂಡೆಮನೆಯ ಸತೀಶ ನಾಯ್ಕ ಹಾಗೂ ಅರಬೈಲಿನ ಬಾಲಕೃಷ್ಣ ನಾಯ್ಕ ಅವರು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದರು. ಅಪಘಾತ ನೋಡಿದ ತಕ್ಷಣ ಅವರು 108ಗೆ ಫೋನ್ ಮಾಡಿದರು. ವಾಹನದಲ್ಲಿ ಸಿಲುಕಿದ್ದ ಗಾಯಾಳುವನ್ನು ಹೊರಗೆ ತಂದು ಅವರನ್ನು ಆಂಬುಲೆನ್ಸ ಮೂಲಕ ಆಸ್ಪತ್ರೆಗೆ ಕಳುಹಿಸಿದರು. ಪಿಸೈ ಸಿದ್ದಪ್ಪ ಗುಡಿ ಅವರು ಸ್ಥಳಕ್ಕೆ ಧಾವಿಸಿ ಗಾಯಾಳುಗಳ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿದರು. ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗಿದೆ.
ಟೆಂಪೋ ಟ್ರಾವೆಲರ್ ಪಲ್ಟಿಯಾದ ಪರಿಣಾಮ ಆ ವಾಹನ ಜಖಂ ಆಗಿದೆ. ಸ್ಥಳದಲ್ಲಿ ಸಂಚಾರ ದಟ್ಟಣೆ ಕಾಣಿಸಿದ್ದು, ಪೊಲೀಸರು ಇನ್ನಿತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಗಾಯಗೊಂಡು ಆಸ್ಪತ್ರೆ ಸೇರಿದ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ.