ಒಳ್ಳೆಯ ಉದ್ಯೋಗ, ಕೈ ತುಂಬ ಸಂಪಾದನೆ, ನೆಮ್ಮದಿಯ ಜೀವನವಿದ್ದರೂ ಜೊಯಿಡಾದ ವೈ ಸಚಿನ್ ಸಾವರ್ಡೆಕರ್ ಅವರಿಗೆ ಜೀವನವನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ವೇಗದ ಬೈಕ್ ಚಾಲನೆ ಅವರ ಬದುಕು ಕಸಿದುಕೊಂಡಿದ್ದು, ಕುಟುಂಬದವರಿಗೆ ಆಧಾರವಾಗಬೇಕಿದ್ದ ಜೊಯಿಡಾದ ಸಚಿನ್ ಸಾವರ್ಡೆಕರ್ ಇದೀಗ ಶವವಾಗಿದ್ದಾರೆ.
ಜೊಯಿಡಾದ ಕುರುವೈ ಸಚಿನ್ ಸಾವರ್ಡೆಕರ್ (25) ಅವರು ವಾಸವಾಗಿದ್ದರು. ಗೋವಾದ ಖಾಸಗಿ ಕಂಪನಿಯಲ್ಲಿ ಅವರು ಒಳ್ಳೆಯ ಉದ್ಯೋಗದಲ್ಲಿದ್ದರು. ಶ್ರಮಜೀವಿ ಆಗಿದ್ದ ಅವರಿಗೆ ಇನ್ನಷ್ಟು ಉನ್ನತ ಹುದ್ದೆ ಅಲಂಕರಿಸುವ ಅವಕಾಶವಿದ್ದಿತು. ಆದರೆ, ವೇಗವ ಬೈಕ್ ಚಾಲನೆ ಅವರ ಬದುಕನ್ನು ಕಿತ್ತುಕೊಂಡಿತು. ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿಯ ಆನಮೋಡ ಘಟ್ಟ ಭಾನುವಾರ ರಾತ್ರಿ ನಡೆದ ಅಪಘಾತದಲ್ಲಿ ವೈ ಸಚಿನ್ ಸಾವರ್ಡೆಕರ್ ಅವರು ಕೊನೆಯುಸಿರೆಳೆದರು.
ಸಚಿನ್ ಸಾವರ್ಡೆಕರ್ ಅವರು ಓಡಿಸುತ್ತಿದ್ದ ಬೈಕಿನಲ್ಲಿ ಸೋನಾರ್ವಾಡಿಯ ಅಮರ್ ಠಾಕೂರ್ ಅವರು ಜೊತೆಯಾಗಿದ್ದರು. ಗೋವಾ ಕಡೆ ಹೊರಟಿದ್ದ ಆ ಬೈಕು ಆನಮೋಡು ಘಟ್ಟ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಡಿವೈಡರಿಗೆ ಗುದ್ದಿತು. ಬೈಕ್ ಗುದ್ದಿದ ರಭಸಕ್ಕೆ ಸವಾರರಿಬ್ಬರು ನೆಲಕ್ಕೆ ಬಿದ್ದು ಗಾಯ ಮಾಡಿಕೊಂಡರು. ಅಪಘಾತ ನೋಡಿದ ಅಲ್ಲಿನ ಜನ ಆಂಬುಲೆನ್ಸಿಗೆ ಫೋನ್ ಮಾಡಿದರು. ಗಾಯಗೊಂಡವರನ್ನು ರಾಮನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಇನ್ನೂ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಕಾರಣ ಬೆಳಗಾವಿಗೆ ಸ್ಥಳಾಂತರಿಸುವ ಕೆಲಸ ನಡೆಯಿತು. ಆದರೆ, ಸಚಿನ್ ಸಾವರ್ಡೆಕರ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರು ದಾರಿ ಮದ್ಯೆಯೇ ಪ್ರಾಣ ತ್ಯಜಿಸಿದರು. ಅಮರ್ ಠಾಕೂರ್ ಅವರನ್ನು ರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.
`ಸಂಚಾರಿ ನಿಯಮ ಪಾಲಿಸಿ. ನಿಧಾನವಾಗಿ ವಾಹನ ಓಡಿಸಿ’