ಅಪಘಾತ ಪ್ರಕರಣದಲ್ಲಿ ಪರಿಹಾರಪಡೆಯಲು ವಾಹನ ವಿಮೆ ಕಡ್ಡಾಯವಾಗಿದ್ದು, ನಕಲಿ ವಿಮೆ ಮಾಡಿಸಿದ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲ್ಲೇಶ್ವರದ ಕೃಷ್ಣ ನಾಯ್ಕ ಅವರ ವಿರುದ್ಧ ರಾಯಲ್ ಸುಂದರo ಜನರಲ್ ಇನ್ಸುರೆನ್ಸ ಕಂಪನಿಯ ತನಿಖಾಧಿಕಾರಿ ಕರಿಬಸವೇಶ್ವರ ಹೊಳೆಮ್ಮನವರ್ ಅವರು ದೂರು ನೀಡಿದ್ದಾರೆ. ‘ನಾನು ವಿಮಾ ಪ್ರತಿನಿಧಿಯೇ ಅಲ್ಲ. ಅಪಘಾತದ ಅವಧಿಯಲ್ಲಿ ನಾನು ಲಾರಿ ಚಾಲಕನಾಗಿದ್ದು, ವಿಮೆಗೆ ಹಾಗೂ ತನಗೆ ಸಂಬoಧವೇ ಇಲ್ಲ’ ಎಂದು ಕೃಷ್ಣ ನಾಯ್ಕ ಅವರು ಮಾಹಿತಿ ನೀಡಿದ್ದಾರೆ.
2020ರ ಜುಲೈ 2ರಂದು ಯಲ್ಲಾಪುರದ ದೇಶಪಾಂಡೆ ನಗರದಲ್ಲಿ ಅಪಘಾತವೊಂದು ನಡೆದಿತ್ತು. ಆ ದಿನ ಚಾಲಕ ಜಗದೀಶ ಮದ್ನೂರು ಅವರು ತಾವು ಓಡಿಸುವ ಭಾರತ್ ಬೆಂಜ್ ಲಾರಿಯನ್ನು ಹೆದ್ದಾರಿ ಪಕ್ಕ ನಿಲ್ಲಿಸಿ ಹೋಗಿದ್ದರು. ಆ ಲಾರಿಗೆ ಹಿಂದಿನಿ0ದ ಮಿನಿ ಟ್ರಕ್ ಗುದ್ದಿದ ಪರಿಣಾಮ ಹಾವೇರಿಯ ಫಕ್ಕೀರೇಶ್ ಭಜಂತ್ರಿ ಎಂಬಾತರು ಸಾವನಪ್ಪಿದ್ದರು. ಜೊತೆಗೆ ಶಿವಕುಮಾರ ಎಂಬಾತರು ಗಾಯಗೊಂಡಿದ್ದರು.
ಅಪಘಾತಕ್ಕೀಡಾದ ವಾಹನಕ್ಕೆ 2020ರ ಜೂನ್ 7ರಿಂದ ಮುಂದಿನ ಒಂದು ವರ್ಷದವರೆಗೆ ರಾಯಲ್ ಸುಂದರo ಜನರಲ್ ಇನ್ಸುರೆನ್ಸ ಕಂಪನಿಯ ವಿಮೆ ಮಾಡಿಸಿದ್ದು ಕಾಣಿಸಿತು. ಸಂತ್ರಸ್ತ ಕುಟುಂಬಕ್ಕೆ ವಿಮಾ ಪರಿಹಾರ ಕೊಡುವುದಕ್ಕಾಗಿ ವಿಮಾ ಕಂಪನಿ ಪ್ರತಿನಿಧಿಗಳು ವಿಚಾರಣೆ ನಡೆಸಿದರು. ಹುಬ್ಬಳ್ಳಿಯ ರಾಯಲ್ ಸುಂದರo ಜನರಲ್ ಇನ್ಸುರೆನ್ಸ ಕಂಪನಿಯ ತನಿಖಾಧಿಕಾರಿ ಕರಿಬಸವೇಶ್ವರ ಹೊಳೆಮ್ಮನವರ್ ಅವರು ಕಂಪನಿ ಪರವಾಗಿ ತನಿಖೆ ನಡೆಸಿದರು. ಆ ವೇಳೆ, ವಿಮಾ ಕಂಪನಿ ಹೆಸರಿನಲ್ಲಿ ನಕಲಿ ಬಾಂಡ್ ವಿತರಣೆ ನಡೆದಿರುವುದು ಗಮನಕ್ಕೆ ಬಂದಿತು. ಕಾರವಾರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾದ ಲಾರಿಗೆ ಆರೋಪಿತರು ನಕಲಿ ವಿಮಾ ಪತ್ರ ನೀಡಿದ ಬಗ್ಗೆ ಅವರು ದೂರಿದ್ದಾರೆ.
ಸ್ಪಷ್ಠನೆ:
`ನಾನು ವಿಮಾ ಪ್ರತಿನಿಧಿಯೇ ಅಲ್ಲ. ಅಪಘಾತದ ಅವಧಿಯಲ್ಲಿ ನಾನು ಲಾರಿ ಚಾಲಕನಾಗಿದ್ದು, ವಿಮೆಗೆ ಹಾಗೂ ತನಗೆ ಸಂಬoಧವೇ ಇಲ್ಲ’ ಎಂದು ಕೃಷ್ಣ ನಾಯ್ಕ ಅವರು ಮಾಹಿತಿ ನೀಡಿದ್ದಾರೆ. ‘ಆ ವೇಳೆ ಅಪಘಾತ ಆಗಿದ್ದು ನಿಜ. ಸಾವು-ನೋವಾಗಿರುವುದು ಸತ್ಯ. ಆದರೆ, ವಿಮೆ ಹಾಗೂ ವಂಚನೆ ವಿಷಯ ತಮಗೆ ಸಂಬಂಧಿಸಿದಲ್ಲ. ಲಾರಿ ಚಾಲಕನಾಗಿದ್ದ ನಾನು ವಿಮೆ ಮಾಡಿಸುವ ಅಧಿಕಾರವನ್ನು ಹೊಂದಿಲ್ಲ’ ಎಂದವರು ಹೇಳಿದ್ದಾರೆ.