ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಇದೀಗ ಕೆಜಿ ಲೆಕ್ಕಾಚಾರದಲ್ಲಿ ಬಟ್ಟೆ ಮಾರಾಟ ಮಳಿಗೆಗಳು ಬಂದಿದೆ. ರಸ್ತೆ ಬದಿಗಳಲ್ಲಿಯೂ ಅಪರಿಚಿತ ವ್ಯಾಪಾರಿಗಳು ಬಟ್ಟೆ ಮಾರಾಟ ಮಾಡುತ್ತಿದ್ದಾರೆ. ಎಲ್ಲಾ ಬ್ರಾಂಡಿನ ಬಟ್ಟೆಗಳು ಒಂದೇ ಕಡೆ ಸಿಗುತ್ತಿವೆ. ಆದರೆ, ಈ ಮಾರಾಟದ ಬಗ್ಗೆ ಅನೇಕ ಅನುಮಾನಗಳುವ್ಯಕ್ತವಾಗುತ್ತಿವೆ.
ಈ ಮೊದಲು ಇಂಥ ಬಟ್ಟೆ ಖರೀದಿಸಿದ ಜನ ತಮ್ಮ ಕೆಟ್ಟ ಅನುಭವಗಳ ಬಗ್ಗೆ ಹೇಳಿದ್ದಾರೆ. `ಶ್ರೀಮಂತರ ಮನೆಗಳಲ್ಲಿ ಬಳಸಿ ಬಿಸಾಡಿದ ಬಟ್ಟೆ, ಅಪಘಾತದಲ್ಲಿ ಸಾವನಪ್ಪಿದವರ ಬಟ್ಟೆಗಳನ್ನು ಇಲ್ಲಿ ತಂದು ಮಾರಾಟ ಮಾಡಲಾಗುತ್ತಿದೆ. ಅನಾಥ ಆಶ್ರಮದ ಹೆಸರಿನಲ್ಲಿ ಮನೆ ಮನೆಗೆ ಬಂದು ಬಟ್ಟೆ ಸಂಗ್ರಹಿಸುವ ಜನ ಆ ಬಟ್ಟೆಗಳನ್ನು ಮತ್ತೆ ನವೀಕರಿಸಿ ಊರೂರು ಅಲೆದಾಡಿ ಮಾರಾಟ ಮಾಡುವವರಿಗೆ ಕೊಡುತ್ತಾರೆ’ ಎಂದವರು ಹೇಳಿದ್ದಾರೆ.
`ಮಹಾನಗರಗಳಲ್ಲಿ ನಡೆಯುವ ಅಪಘಾತಗಳಲ್ಲಿ ಸಾವನಪ್ಪಿದವರ ಮೈಮೇಲಿನ ಬಟ್ಟೆಗಳನ್ನು ಕೆಲವರುಪಡೆಯುತ್ತಾರೆ. ಅಂಥ ಬಟ್ಟೆಗಳನ್ನು ತೊಳೆದು ಇಸ್ತ್ರಿ ಮಾಡಿ ಬೇರೆ ಬೇರೆ ಬ್ರಾಂಡುಗಳ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ’ ಎಂಬರ್ಥದಲ್ಲಿಯೂ ಕೆಲವರು ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ. `ನಂಬಿಕೆಗೆ ಅರ್ಹ ಖಾಯಂ ಮಳಿಗೆಗಳಲ್ಲಿ ಖರೀದಿ ಮಾಡಿದರೆ ಮರುದಿನ ಹೋಗಿ ಪ್ರಶ್ನಿಸಬಹುದು. ಆನ್‌ಲೈನ್ ಮೂಲಕ ಖರೀದಿಸಿದರೂ ಇಷ್ಟವಾಗದೇ ಇದ್ದರೆ ಅಂಥವುಗಳನ್ನು ಮರಳಿಸಬಹುದು. ಆದರೆ, ನಾಲ್ಕು ದಿನ ಸೇಲ್ ಸೇಲ್ ಎಂದು ಕೆಜಿ ಲೆಕ್ಕಾಚಾರದಲ್ಲಿ ಬಟ್ಟೆ ಮಾರಾಟ ಮಾಡಿ, ನಂತರ ಊರು ಬಿಟ್ಟು ಹೋಗುವವರನ್ನು ಹಿಡಿಯುವುದಾದರೂ ಹೇಗೆ?’ ಎಂದು ಜನ ಪ್ರಶ್ನಿಸುತ್ತಿದ್ದಾರೆ.
`ಕೆಜಿಗೆ 700ರೂ ಕೊಟ್ಟು ಬಟ್ಟೆ ಖರೀದಿಸಿದಾಗ ತನಗೂ ಇಂಥ ಕೆಟ್ಟ ಅನುಭವ ಆಗಿದೆ’ ಎಂದು ವಿಡಿಯೋವೊಂದರ ಅಡಿಭಾಗ ಆದ್ಯಾ ಹೆಗಡೆ ಅವರು ಅನಿಸಿಕೆ ಹಂಚಿಕೊoಡಿದ್ದಾರೆ. `ಸೆಕೆಂಡ್ ಸೆಲ್?’ ಎಂದು ಗೌರಿ ಹೆಗಡೆ ಅವರು ಪ್ರಶ್ನಾರ್ಥಕ ರೂಪದಲ್ಲಿ ಬರೆದುಕೊಂಡಿದ್ದಾರೆ. `ಕೆಲವೊಮ್ಮೆ ಪ್ರಚಾರಕ್ಕಾಗಿ ಕೆಲ ಕಂಪನಿಯವರು ಕಡಿಮೆ ದರದಲ್ಲಿ ಬಟ್ಟೆ ಮಾರಾಟ ಮಾಡುತ್ತಾರೆ. ಬೆಂಗಳೂರು ಸೇರಿ ವಿವಿಧ ಕಡೆ ಇಂಥ ಕಂಪನಿಗಳಿವೆ. ಆದರೆ, ಅಲ್ಲಿ ಒಂದೇ ಬ್ರಾಂಡಿನ ಬಟ್ಟೆಗಳು ಕಡಿಮೆ ದರದಲ್ಲಿ ಸಿಗುತ್ತದೆ. ಸದ್ಯ ಎಲ್ಲಾ ಕಂಪನಿ ಬಟ್ಟೆಗಳು ಒಂದೇ ಕಡೆ ಬೊಗಸೆ ತುಂಬಿ ಕೊಡುವುದು ಅನುಮಾನಕ್ಕೆ ಕಾರಣ’ ಎನ್ನುವವರು ಇದ್ದಾರೆ.
ಕೆಲವರು ಕೆಟ್ಟ ಅನುಭವ ಹಂಚಿಕೊoಡಿದ್ದು, ಕೆಲ ಸಮಯದ ನಂತರ ಆ ಬರಹಗಳು ಡಿಲಿಟ್ ಆಗುತ್ತಿದೆ. ಎಲ್ಲವೂ ಸರಿಯಾಗಿಯೇ ಇದ್ದರೆ ಡಿಲಿಟ್ ಮಾಡಿಸುವುದು ಏತಕೆ? ಎಂಬ ಅನುಮಾನವೂ ಕಾಡುತ್ತಿದೆ. ಮಾರಾಟಕ್ಕೆ ಬಂದ ಬಟ್ಟೆಗಳು ಸೆಕೆಂಡ್ ಸೇಲಾ? ಅಥವಾ ಶವಗಳಿಗೆ ಹೊದೆಸಿದ ಬಟ್ಟೆಗಳಾ? ಶ್ರೀಮಂತರು ಬಳಸಿ ಬಿಸಾಡಿದವನ್ನು ತಂದು ಮಾರಲಾಗುತ್ತಿದೆಯಾ? ಅಥವಾ ಅನಾಥಾಶ್ರಮದ ಹೆಸರಿನಲ್ಲಿ ಸಂಗ್ರಹಿಸಿದವಾ? ಎನ್ನುವುದರ ಬಗ್ಗೆ ಎಲ್ಲಿಯೂ ಖಚಿತತೆ ಇಲ್ಲ.