ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದರಲ್ಲಿ ಮೂರು ಘಟಕ ಕೆಲಸ ಮಾಡುತ್ತಿಲ್ಲ. ಮತ್ತೊಂದು ಘಟಕ 1 ರೂಪಾಯಿಗೆ 5 ಲೀಟರ್ ನೀರು ನೀಡುವ ಬದಲು ಒಂದೇ ಲೀಟರ್ ನೀರು ಕೊಡುತ್ತಿದೆ.
ಜನವರಿ 27ರಂದು ಯಲ್ಲಾಪುರ ಪಟ್ಟಣದಲ್ಲಿ ಹೊರ ಮಂಗಳವಾರ ಆಚರಣೆ ನಡೆದಿದ್ದು, ಮನೆಯಿಂದ ಹೊರಗಿದ್ದ ಜನ ಕುಡಿಯುವ ನೀರಿಗೆ ತೊಂದರೆ ಅನುಭವಿಸಿದ್ದಾರೆ. ನಾಲ್ಕು ಘಟಕಗಳಿಗೆ ತೆರಳಿದರೂ ಸೂಕ್ತ ನೀರು ಸಿಗದ ಕಾರಣ ಜನ ಪಟ್ಟಣ ಪಂಚಾಯತ ಆಡಳಿತದ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ. ಶುದ್ಧ ಕುಡಿಯುವ ನೀರು ಕೊಡುತ್ತಿದ್ದ ಘಟಕಗಳು ಐದೇ ವರ್ಷದಲ್ಲಿ ಹಾಳಾದ ಬಗ್ಗೆ ಆಕ್ರೋಶಹೊರಹಾಕಿದ್ದಾರೆ.
ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ದೇವಿ ದೇವಾಲಯದ ಬಳಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಶುರುವಾದ ಕೆಲ ಸಮಯ ಶುದ್ಧವಾಗಿಯೇ ನಡೆದ ಈ ಘಟಕ ಕ್ರಮೇಣ ನೀರು ಕೊಡುವ ಕೆಲಸ ನಿಲ್ಲಿಸಿದೆ. ಆಗಾಗ, ಈ ಘಟಕವನ್ನು ದುರಸ್ಥಿ ಮಾಡಿದರೂ ಜನರ ನಿರೀಕ್ಷೆಗೆ ಅನುಗುಣವಾಗಿ ನೀರು ಸಿಗುತ್ತಿಲ್ಲ. ಯಲ್ಲಾಪುರದ ಜಾತ್ರೆ ಹಿನ್ನಲೆ ಈ ದಿನ ಪಟ್ಟಣದ ಜನ ಹೊರ ಮಂಗಳವಾರ ಆಚರಣೆಗಾಗಿ ವಿವಿಧ ಕಡೆ ತೆರಳುತ್ತಿದ್ದು, 1ರೂಪಾಯಿಗೆ 5 ಲೀಟರ್ ನೀರು ಸಿಗಬೇಕಾದ ಘಟಕ ಹಾಳಾದ ಕಾರಣ ದುಬಾರಿ ದುಡ್ಡು ಕೊಟ್ಟು ಬಾಟಲಿ ನೀರು ಖರೀದಿಸಿದ್ದಾರೆ.
ಕುಡಿಯುವ ನೀರಿನ ಘಟಕದ ಅವ್ಯವಸ್ಥೆಯ ಬಗ್ಗೆ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅಸಮಧಾನವ್ಯಕ್ತಪಡಿಸಿದ್ದು, ಅಧಿಕಾರಿಗಳನ್ನು ಪ್ರಶ್ನಿಸಿದ ನಂತರ ಬಸ್ ನಿಲ್ದಾಣದ ಘಟಕ ದುರಸ್ಥಿ ಆಗಿದೆ. ಆದರೆ, ಆ ಘಟಕ ಸಹ ಕೊಟ್ಟ ಕಾಸಿಗೆ ತಕ್ಕಂತೆ ನೀರು ಪೂರೈಸಿಲ್ಲ. 1 ರೂಪಾಯಿಗೆ 5 ಲೀಟರ್ ನೀರು ಒದಗಿಸುವ ಬದಲು ಒಂದೇ ಲೀಟರ್ ನೀರು ನೀಡುತ್ತಿದ್ದು, ಪಟ್ಟಣ ಪಂಚಾಯತದ ನೀರಿನ ವ್ಯಾಪಾರದಲ್ಲಿಯೂ ನಗರದ ಜನರಿಗೆ ಅನ್ಯಾಯವಾಗಿದೆ. 5-10 ಲೀಟರ್ ನೀರಿನ ಕ್ಯಾನು ತಂದವರು ಆ ಕ್ಯಾನು ಭರ್ತಿಯಾಗುವಷ್ಟು ಪ್ರಮಾಣದಲ್ಲಿ ನೀರು ಸಿಗದೇ ಸಮಸ್ಯೆ ಅನುಭವಿಸಿದ್ದಾರೆ.
`ಪಟ್ಟಣ ಪಂಚಾಯತದಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತದೆ. ಶುದ್ಧ ನೀರಿನ ಘಟಕದಲ್ಲಿಯೂ ಹಾಗೇ ಆಗಿದ್ದು, ಮುಂದಿನ ಹೊರ ಮಂಗಳವಾರದ ಒಳಗೆ ಅವ್ಯವಸ್ಥೆ ಸರಿಪಡಿಸಬೇಕು. ಜಾತ್ರೆಯ ಅವಧಿಯಲ್ಲಿ ಜನರಿಗೆ ಸಮಸ್ಯೆ ಆಗದ ಹಾಗೇ ಎಚ್ಚರಿಕೆವಹಿಸಬೇಕು’ ಎಂದು ಸೋಮೇಶ್ವರ ನಾಯ್ಕ ಅವರು ಆಗ್ರಹಿಸಿದ್ದಾರೆ. ದೀಪಕ ನಾಯ್ಕ ಹಾಗೂ ಹನುಮಂತ ಕಾಳಮ್ಮನಗರ ಅವರು ತಮಗಾದ ಸಮಸ್ಯೆ ವಿವರಿಸಿದ್ದಾರೆ.