`ಭ್ರೂಣ ಲಿಂಗ ಪತ್ತೆ ಮಾಡುವವರ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂ ಹಣ ಕೊಡಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಶಂಕರ್ ರಾವ್ ಅವರು ಹೇಳಿದ್ದಾರೆ.
ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ರಾಷ್ಟ್ರಿಯ ಹೆಣ್ಣು ಮಗುವಿನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭ್ರ‍್ರೂಣ ಲಿಂಗ ಪತ್ತೆ ಪ್ರಕರಣ ಕುರಿತು ಮಾಹಿತಿಯನ್ನು ನೀಡಿದ್ದಲ್ಲಿ ಸರ್ಕಾರದಿಂದ ಒಂದು ಲಕ್ಷ ಬಹುಮಾನ ನೀಡಲಾಗುತ್ತದೆ’ ಎಂದು ತಿಳಿಸಿದ್ದಾರೆ.
`ನಮ್ಮ ದೇಶದ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ಮತ್ತು ಸ್ಥಾನಮಾನ ಇದೆ. ಹೆಣ್ಣು ಮಗುವನ್ನು ಮನೆಯನ್ನು ಬೆಳಗುವ ದೀಪ ಎಂದು ಕರೆಯುತ್ತಾರೆ. ಹೀಗಿರುವಾಗ ಅದೇ ಜನ ಮನೆಯಲ್ಲಿ ಹೆಣ್ಣು ಹುಟ್ಟಿದರೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಿದ್ದು, ಅದನ್ನು ತಡೆಯಬೇಕು’ ಎಂದವರು ಕರೆ ನೀಡಿದ್ದಾರೆ.
ತೋಡುರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ ರಾಹುಲ್ ಎಸ್, ಸಹಾಯಕ ಆಡಳಿತಾಧಿಕಾರಿ ಯೂಸುಫ್ ಖಾನ್, ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಬಸವರಾಜ್ ಕನ್ನಕ್ಕನವರ, ನರ್ಸಿಂಗ್ ಅಫೀಸರ್ ಸುಷ್ಮ್ಮಾ, ಸಂಧ್ಯಾ, ರತೀಶ್ ನಾಯ್ಕ ಕಾರ್ಯಕ್ರಮದಲ್ಲಿದ್ದರು.