ಜೊಯಿಡಾದ ಕಾಡು ಅಧ್ಯಯನಕ್ಕೆ ಅಳವಡಿಸಿದ್ದ ಕ್ಯಾಮರಾವನ್ನು ಕಳ್ಳರು ಕದ್ದಿದ್ದಾರೆ. ಹುಲಿ ಸಮೀಕ್ಷೆಗಾಗಿ ಕಾಡಿನಲ್ಲಿರಿಸಿದ್ದ 53 ಸಾವಿರ ರೂ ಮೌಲ್ಯದ ಕ್ಯಾಮರಾ ಕಾಣೆಯಾಗಿದೆ.
ಜನವರಿ 13ರಿಂದ ಭಾರತದಲ್ಲಿ ಹುಲಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ಕಾಡಿನಲ್ಲಿ ಓಡಾಡುವ ಇನ್ನಿತರ ಪ್ರಾಣಿಗಳ ಚಲನ-ವಲನವನ್ನು ಕ್ಯಾಮರಾ ಮೂಲಕ ಸಹ ಗಮನಿಸಲಾಗುತ್ತದೆ. ಕಾಡಿನಲ್ಲಿ ಕ್ಯಾಮರಾ ಕಂಡ ಕಳ್ಳರು ತಮ್ಮ ಅಕ್ರಮ ಚಟುವಟಿಕೆಗೆ ಸಮಸ್ಯೆ ಆಗುವ ಆತಂಕದಲ್ಲಿ ಆ ಕ್ಯಾಮರಾವನ್ನೇ ಕದ್ದಿದ್ದಾರೆ.
ಜೊಯಿಡಾ ರಾಮನಗರ ಬಳಿಯ ಕ್ಯಾಸಲ್ ರಾಕ್ ವನ್ಯಜೀವಿ ವಲಯದಲ್ಲಿ ಕ್ಯಾಮರಾ ಕಳ್ಳತನ ನಡೆದಿದೆ. ಇಲ್ಲಿನ ಅವೇಡಾ-ಪೊಪ್ಪವಾಡಿ ಬೀಟ್ ಬಳಿಯ ವಜ್ರ ಪಾಲ್ಸ್ ಗೆ ಹೋಗುವ ರಸ್ತೆಯಲ್ಲಿ ಅರಣ್ಯಾಧಿಕಾರಿಗಳು ಕ್ಯಾಮರಾ ಅಳವಡಿಸಿದ್ದು, ಕ್ಯಾಮರಾ ಜೊತೆಗಿದ್ದ ಮೆಮೋರಿ ಕಾರ್ಡನ್ನು ಕಿಡಿಗೇಡಿಗಳು ಅಪಹರಿಸಿದ್ದಾರೆ.
ಜನವರಿ 21ರ ಸಂಜೆ ಕ್ಯಾಮರಾ ಕಾಡಿನಲ್ಲಿರುವುದನ್ನು ಅರಣ್ಯ ಸಿಬ್ಬಂದಿ ನೋಡಿದ್ದಾರೆ. ಆದರೆ, ಮರುದಿನ ಬೆಳಗ್ಗೆ ನೋಡಿದಾಗ ಅಲ್ಲಿ ಕ್ಯಾಮರಾ ಸಿಕ್ಕಿಲ್ಲ. ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಕ್ಯಾಮರಾ ಪತ್ತೆ ಆಗಿಲ್ಲ. ಈ ಹಿನ್ನಲೆ ಆ ಕ್ಯಾಮರಾ ಕದ್ದವರನ್ನು ಪತ್ತೆ ಮಾಡಿಕೊಡುವಂತೆ ಬಜಾರಕೋಣದ ಉಪವಲಯ ಅರಣ್ಯಾಧಿಕಾರಿ ಸಂದೀಪ ಅರ್ಕಸಾಲಿ ಅವರು ಪೊಲೀಸರ ಮೊರೆ ಹೋಗಿದ್ದಾರೆ. ರಾಮನಗರ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಹುಡುಕಾಟ ನಡೆಸಿದ್ದಾರೆ.