ಮಹಿಳೆಯರ ಸ್ನೇಹ ಬೆಳೆಸಿ ಅವರ ಖಾಸಗಿ ಫೋಟೋಪಡೆದು ನಂತರ ಬೆದರಿಕೆ ಒಡ್ಡುತ್ತಿದ್ದ ವ್ಯಕ್ತಿಯನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ ಹೊನ್ನಾವರದ ಮಹ್ಮದ್ ಯುಶಾ ನಂತರ ಅವರ ಸಲುಗೆ ಬೆಳೆಸಿ ಅಶ್ಲೀಲ ಸಂದೇಶ ರವಾನಿಸುತ್ತಿರುವುದು ಬೆಳಕಿಗೆ ಬಂದಿದೆ.
ಹೊನ್ನಾವರದ ಮಂಕಿ ಬಳಿಯಿರುವ ಭಾಷಾ ಕಾಲೋನಿಯಲ್ಲಿ ಮಹ್ಮದ್ ಯುಶಾ ಮಹ್ಮದ್ ಸಾಯಿ ಅಬು ಮಹ್ಮದಾ (31) ಅವರು ವಾಸವಾಗಿದ್ದರು. ಫೇಸ್ಬುಕ್, ವಾಟ್ಸಪ್, ಇನಸ್ಟಾಗ್ರಾಂ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಅವರು ಮಹಿಳೆಯರ ಸ್ನೇಹ ಸಂಪಾದಿಸುತ್ತಿದ್ದರು. ಮಹಿಳೆಯರ ಅಂದ-ಚAದದ ಬಗ್ಗೆ ಹೊಗಳಿ ಅವರ ಸ್ನೇಹ ಸಂಪಾದಿಸುತ್ತಿದ್ದರು. ಅದಾದ ನಂತರ ತಮ್ಮ ಬಲೆಗೆ ಬಿದ್ದ ಮಹಿಳೆಯರ ಖಾಸಗಿ ಫೋಟೋಗಳನ್ನು ಪಡೆಯುತ್ತಿದ್ದರು. ನಂತರ ಅದೇ ಫೋಟೋಗಳನ್ನು ಬಳಸಿ ಬೆದರಿಸುತ್ತಿದ್ದರು.
ಜಾಲತಾಣಗಳ ಮೂಲಕ ಮಹಿಳೆಯರಿಗೆ ಅಶ್ಲೀಲ ಮೆಸೆಜ್ ಮಾಡುತ್ತಿದ್ದರು. ಮಹ್ಮದ್ ಯುಶಾರ ವಿಕೃತ ಮನಸ್ಸಿಗೆ ಅನೇಕ ಮಹಿಳೆಯರು ನೊಂದಿದ್ದರು. ಭಟ್ಕಳದ ಮುಗ್ದುಂ ಕಾಲೋನಿಯ ಮಹಿಳೆಯೊಬ್ಬರಿಗೂ ಮಹ್ಮದ್ ಯುಶಾ ಕೆಟ್ಟ ಮೆಸೆಜ್ ಮಾಡಿದ್ದರು. ಮಹಿಳೆಯ ಮೊಬೈಲ್ ಸಂಖ್ಯೆ ಸಂಪಾದಿಸಿ ಸಲುಗೆ ಬೆಳೆಸಿಕೊಂಡಿದ್ದ ಮಹ್ಮದ್ ಯುಶಾ ಆ ಸಲುಗೆಯಿಂದಲೇ ಖಾಸಗಿ ಫೋಟೋ ಸಂಗ್ರಹಿಸಿದ್ದರು. ನಂತರ ಅದೇ ಫೋಟೋ ಬಳಸಿ ಬೆದರಿಕೆ ಒಡ್ಡಿದ್ದರು. ಕೆಟ್ಟ ಕೆಟ್ಟ ಮೆಸೆಜುಗಳನ್ನು ಮಾಡುತ್ತಿದ್ದರು. ಆ ಫೋಟೋಗಳನ್ನು ಎಲ್ಲಡೆ ವೈರಲ್ ಮಾಡುವುದಾಗಿಯೂ ಹೆದರಿಸಿದ್ದರು.
ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬೆಂಗಳೂರಿನಲ್ಲಿ ಅಡಗಿದ್ದ ಮಹ್ಮದ್ ಯುಶಾ ಅವರನ್ನು ಬಂಧಿಸಿದ್ದಾರೆ. ಆತನ ಬಳಿಯಿದ್ದ ಮೊಬೈಲ್ ಹಾಗೂ ಪೆನ್‌ಡ್ರವ್’ನ್ನು ವಶಕ್ಕೆಪಡೆದಿದ್ದಾರೆ. ಜಪ್ತಿಗೊಂಡ ವಸ್ತುಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.