`ಅಭಿವೃದ್ಧಿ ಹೆಸರಿನಲ್ಲಿ ಮೀನುಗಾರರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ಇದನ್ನು ಮೀನುಗಾರರು ಸಂಘಟಿತರಾಗಿ ಎದುರಿಸಬೇಕು’ ಎಂದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ದಿಲೀಪ್ ಅರ್ಗೇಕರ್ ಅವರು ಹೇಳಿದ್ದಾರೆ. `ಮೀನುಗಾರರ ಬದುಕಿನ ಮೇಲೆ ಹೊಡೆದು ನಡೆಸುವ ಅಭಿವೃದ್ಧಿ ನಮಗೆ ಬೇಡ’ ಎಂದವರು ಅನಿಸಿಕೆ ಹಂಚಿಕೊoಡಿದ್ದಾರೆ.
`ಈಗಾಗಲೇ ಕಾರವಾರ ಹಾಗೂ ಹೊನ್ನಾವರದಲ್ಲಿ ಬಂದರು ಮಾಡಲು ಸರ್ಕಾರ ಆಸಕ್ತಿವಹಿಸಿದೆ. ಅಂಕೋಲಾದ ಕೇಣಿಯಲ್ಲೂ ಜೆಎಸ್‌ಡಬ್ಲ್ಯೂ ಕಂಪನಿ ಬಂದರು ನಿರ್ಮಾಣ ಸಿದ್ಧತೆ ನಡೆಸಿದೆ. ಕಾರವಾರ ಅಂಕೋಲಾ ಕರಾವಳಿ ಭಾಗದಲ್ಲಿ ಬಹುಭಾಗ ನೌಕಾನೆಲೆಯವರ ವ್ಯಾಪ್ತಿಗೆ ಹೋಗಿದ್ದು, ನೌಕಾನೆಲೆ ಜಾಗದಲ್ಲಿ ಮೀನುಗಾರಿಕೆ ಮಾಡಲು ಅವಕಾಶವಿಲ್ಲ. ಇದೀಗ ಬಂದರು ನಿರ್ಮಾಣವಾದರೂ ಮೀನುಗಾರರ ಕಸುಬಿಗೆ ಸಮಸ್ಯೆಯಾಗಲಿದೆ’ ಎಂದು ಅವರು ಹೇಳಿದ್ದಾರೆ.
`ಕೇಣಿಯಲ್ಲಿ ಬಂದರು ಆದಾಗ ದೊಡ್ಡ ದೊಡ್ಡ ಹಡಗುಗಳು ಬರಲಿದೆ. ಇದರಿಂದ ಮತ್ಸ್ಯ ಸಂತತಿ ಮೇಲೆ ಪರಿಣಾಮ ಬೀಳಲಿದೆ. ಜೊತೆಗೆ ಹಡಗು ಓಡಾಡುವ ಜಾಗದಲ್ಲಿ ಮೀನು ಸಿಗದೇ ಮೀನುಗಾರರು ತೊಂದರೆಗೆ ಸಿಲುಕಬೇಕಾಗುತ್ತದೆ. ಮೀನುಗಾರರಿಗೆ ಮೀನುಗಾರಿಕೆಯೇ ಪ್ರಮುಖ ಉದ್ಯೋಗ. ಅವರ ಉದ್ಯೋಗವನ್ನೇ ಕಿತ್ತುಕೊಂಡು ಬಂದರು ಮಾಡಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಹೇಳಿದ್ದಾರೆ.
`ಸಾರ್ವಜನಿಕ ಅಹವಾಲು ಸಭೆಯಲ್ಲಿ ಮೀನುಗಾರರೆಲ್ಲರೂ ಒಟ್ಟಾಗಿ ಬಂದರು ವಿರೋಧಿಸಬೇಕು. ನಮ್ಮನ್ನು ನಮ್ಮ ಹಾಗೇ ಬದುಕಲು ಬಿಡಿ ಎಂದು ಆಗ್ರಹಿಸಬೇಕು. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರು ಯೋಜನೆ ವಿರುದ್ದ ಹೋರಾಡಲು ಸಿದ್ದರಾಗಿದ್ದೇವೆ’ ಎಂದವರು ಹೇಳಿದ್ದಾರೆ.
ಸಂಘಟನೆ ಜಿಲ್ಲಾಧ್ಯಕ್ಷರಾದ ರೋಶನ್ ಹರಿಕಂತ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಹರಿಕಂತ್ರ, ಜಿಲ್ಲಾ ಉಪಾಧ್ಯಕ್ಷ ಭರತ್ ಕಾರ್ವಿ, ಸುನಿಲ್ ತಾಂಡೇಲ್, ಪ್ರವೀಣ್ ತಾಂಡೇಲ್, ಜಿಲ್ಲಾ ಕಾರ್ಯದರ್ಶಿ ಕೃಷ್ಣ ತಾಂಡೇಲ್, ರಾಹುಲ್ ತಾಂಡೇಲ್, ನಂದೀಶ್ ಮಾಜಾಳಿಕರ್, ರವಿ ಹೊಸ್ಕಟ್ಟ, ವಿನಾಯಕ್ ಕಾರ್ವಿ, ರಾಜು ತಾಂಡೇಲ್, ಮೋಹನ್ ಉಳ್ಳೇಕರ್, ದಿಲೀಪ್ ಉಳ್ವೇಕರ್. ಅಂಕೋಲಾ ತಾಲೂಕು ಅಧ್ಯಕ್ಷ ಮಹೇಶ್ ಹರಿಕಂತ್ರ ಸಹ ಇದೇ ಮಾತು ಪುನರುಚ್ಚರಿಸಿದ್ದಾರೆ.
Discussion about this post