ಮುಖ್ಯಾಧ್ಯಾಪಕ ಹುದ್ದೆಯ ಕನಸು ಕಟ್ಟಿಕೊಂಡು ನಿವೃತ್ತಿ ಅಂಚಿನಲ್ಲಿರುವಾಗ ಟಿಇಟಿ ಪರೀಕ್ಷೆ ಎದುರಿಸಿದ ಅಂಕೋಲಾದ 285 ಶಿಕ್ಷಕರು ಆ ಪರೀಕ್ಷೆಯಲ್ಲಿ ಪಾಸಾಗಿಲ್ಲ!
ಅಂಕೋಲಾ ತಾಲೂಕಿನಲ್ಲಿ 79 ಕಿರಿಯ ಪ್ರಾಥಮಿಕ ಮತ್ತು 74 ಹಿರಿಯ ಪ್ರಾಥಮಿಕ ಶಾಲೆಗಳು, 11 ಸರಕಾರಿ ಪ್ರೌಢ ಶಾಲೆಗಳು ಸೇರಿ 164 ಶಾಲೆಗಳಿವೆ. ಈ ಪೈಕಿ ಒಟ್ಟು 486 ಶಿಕ್ಷಕರಿದ್ದಾರೆ. ಈ ಪೈಕಿ ಅನೇಕ ಶಿಕ್ಷಕರು ಹಲವು ವರ್ಷಗಳ ಸೇವಾ ಅನುಭವಹೊಂದಿದ್ದಾರೆ. ಮಕ್ಕಳಿಗೆ ಮನಸ್ಸು ಮುಟ್ಟುವ ರೀತಿ ಪಾಠ ಮಾಡುವ ಕೌಶಲ್ಯಗಳಿಸಿದ್ದಾರೆ. ಆದರೆ, ಪರೀಕ್ಷೆ ಎದುರಿಸಿದವರಲ್ಲಿ ಶೇ 75ರಷ್ಟು ಶಿಕ್ಷಕರು ಪಾಸಾಗಿಲ್ಲ!
ಈ ಹಿಂದೆ ಟಿಇಟಿ ವ್ಯವಸ್ಥೆ ಇರಲಿಲ್ಲ. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ಶಿಕ್ಷಕರಿಂದ ಸಾಧ್ಯವಾಗುತ್ತಿಲ್ಲ. ಶಿಕ್ಷಕರ ಅನುಭವಕ್ಕೂ ಟಿಇಟಿಗೂ ಸಾಕಷ್ಟು ವ್ಯತ್ಯಾಸವಿರುವುದು ಸಮಸ್ಯೆಗೆ ಕಾರಣವಾಗಿದ್ದು, ಬೇರೆ ಯಾವ ಇಲಾಖೆಗೂ ಇಲ್ಲದ ಕಠಿಣ ನಿಯಮ ಶಿಕ್ಷಣ ಇಲಾಖೆಗೆ ಬಂದಿದೆ. ಈ ಹೊಸ ಪರೀಕ್ಷಾ ಪದ್ದತಿ ಶಿಕ್ಷಕರ ಮೇಲೆ ಒತ್ತಡ ತರುತ್ತಿದೆ. ಜೊತೆಗೆ ಅದಕ್ಕೆ ಸಿದ್ಧವಾಗುವುದರಲ್ಲಿಯೇ ಶಿಕ್ಷಕರ ಸಮಯ ಹಾಳಾಗುತ್ತಿದೆ.
ಸದ್ಯ ಟಿಇಟಿ ಎಂಬುದು ಶಿಕ್ಷಕರ ಬಡ್ತಿಗೂ ಕುತ್ತು ತಂದಿದೆ. ಕಳೆದ 4-5 ವರ್ಷದಿಂದ ಬಡ್ತಿ ಭಾಗ್ಯದ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸುಪ್ರೀಂ ಆದೇಶ ನಿರಾಸೆ ಮೂಡಿಸಿದೆ. ಸಹಶಿಕ್ಷಕರ ಹುದ್ದೆಯಿಂದ ಮುಖ್ಯಗುರುಗಳ ಹುದ್ದೆ ಕನಸಾಗಿಯೇ ಉಳಿದಿದೆ. ಬಹುತೇಕ ಶಿಕ್ಷಕರು ಅಂದಿನ ಶಿಕ್ಷಣ ವ್ಯವಸ್ಥೆಗೆ ಅಗತ್ಯವಾಗಿದ್ದ ಟಿಸಿಎಚ್, ಜಿಪಿಟಿ, ಇಂಟರ್‌ಶಿಪ್ ಪರೀಕ್ಷೆಗಳ ಬಳಿಕವೇ ನೇಮಕವಾಗಿದ್ದಾರೆ. ಈಗಾಗಲೇ ಇಂಟರ್‌ಶಿಪ್‌ನಿAದ ನೇಮಕಗೊಂಡ ನಹುತೇಕ ಶಿಕ್ಷಕರು ನಿವೃತ್ತಿಯಾಗಿದ್ದಾರೆ. ಆದರೆ, ಟಿಸಿಎಚ್ ಆಧರಿಸಿದ ಶಿಕ್ಷಕರು ಇಂದಿಗೂ ಸೇವೆಯಲ್ಲಿದ್ದು, ಟಿಇಟಿ ಪರೀಕ್ಷೆ ಅವರ ಸಮಸ್ಯೆಗೆ ಕಾರಣವಾಗಿದೆ.