ಸಿದ್ದಾಪುರ ರವೀಂದ್ರ ನಗರದ ಹೀರೋ ಶೋರೂಮಿನ ಬಳಿ ನ್ಯಾನ್ಯೋ ಕಾರು ನಿಯಂತ್ರಣ ತಪ್ಪಿದೆ. ಪರಿಣಾಮ ರಸ್ತೆ ಬದಿ ನಿಂತಿದ್ದ ಮತ್ತೊಂದು ಕಾರಿಗೆ ನ್ಯಾನೋ ಕಾರು ಗುದ್ದಿದೆ. ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ.
ಶಿರಸಿ ಟಿಎಸ್‌ಎಸ್ ರಸ್ತೆಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಪ್ರಶಾಂತ ಗ್ರೆಗೋರಿ ಫರ್ನಾಂಡೀಸ್ ಅವರು ಫೆಬ್ರವರಿ 18ರಂದು ನ್ಯಾನೋ ಕಾರು ಓಡಿಸಿಕೊಂಡು ಹೊರಟಿದ್ದರು. ಸಿದ್ದಾಪುರ ರವೀಂದ್ರ ನಗರದ ಹೀರೋ ಶೋ ರೂಮಿನ ಬಳಿಯ ಕಚ್ಚಾ ರಸ್ತೆಯಲ್ಲಿ ಬಿಳಿ ಬಣ್ಣದ ಮಾರುತಿ ಸುಜುಕಿ ಬ್ರಿಝಾ ಕಾರು ನಿಂತಿರುವುದನ್ನು ಅವರು ನೋಡಿದ್ದರು. ಅದಾಗಿಯೂ, ಅವರ ವೇಗವಾದ ಕಾರು ಚಾಲನೆ ಅಪಾಯ ಆಹ್ವಾನಿಸಿದ್ದು, ರಸ್ತೆ ಬದಿ ನಿಂತಿದ್ದ ಕಾರಿಗೆ ಪ್ರಶಾಂತ ಫರ್ನಾಂಡೀಸ್ ಅವರು ತಮ್ಮ ಕಾರು ಗುದ್ದಿದರು.
ಪರಿಣಾಮ ನ್ಯಾನೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅತೋನಿ ಡಯಾಗೋ ಬೆರಿಟೋ (75 ವರ್ಷ), ಫಾತಿಮಾ ಅಂಥೋನಿ ಬೆರಿಟೋ (70 ವರ್ಷ), ಅಂಥೋನಿ ಅಗಸ್ತಿನ್ ಫರ್ನಾಂಡೀಸ್ (70 ವರ್ಷ) ಮತ್ತು ಅಂಜಲಿ ಎಡವರ್ಡ್ ಫರ್ನಾಂಡೀಸ್ (60 ವರ್ಷ) ಅವರ ತಲೆ ಹಾಗೂ ಕಾಲುಗಳಿಗೆ ಗಾಯವಾಯಿತು. ರಕ್ತ ಸೋರುವಷ್ಟರ ಮಟ್ಟಿಗೆ ಗಾಯವಾದ ಕಾರಣ ಅವರೆಲ್ಲರೂ ಆಸ್ಪತ್ರೆ ಸೇರಿದರು. ಮಾರುತಿ ಕಾರಿನ ಮಾಲಕ ಮಹಾಬಲೇಶ್ವರ ರಾಮಾ ನಾಯ್ಕ ಅವರು ಅಪಘಾತದ ಬಗ್ಗೆ ಪೊಲೀಸ್ ದೂರು ನೀಡಿದ್ದು, ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದರು.
`ಅಪಘಾತ ತಪ್ಪಿಸಲು ನಿಧಾನವಾಗಿ ವಾಹನ ಓಡಿಸಿ’