ಎರಡು ವರ್ಷಕ್ಕೆ ಒಮ್ಮೆ ನಡೆಯುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಗೆ ದಿನಗಣನೆ ಶುರುವಾಗಿದೆ. ಫೆ 24ರಿಂದ ಜಾತ್ರೆ ನಡೆಯಲಿದ್ದು, ಕೆಲ ಆನ್‌ಲೈನ್ ವೇದಿಕೆಗಳು ದೇವಿ ಭಕ್ತರನ್ನು ವಂಚಿಸುವ ಕಾಯಕದಲ್ಲಿ ತೊಡಗಿವೆ.
`ಯಜಮಾನ’ ಎಂಬ ಜಾಲತಾಣದ ಪುಟ ಹಾಗೂ ಮಾರಿಕಾಂಬಾ ದೇಗುಲಕ್ಕೆ ಯಾವುದೇ ಸಂಬoಧ ಇಲ್ಲ. ಅದಾಗಿಯೂ `ಯಜಮಾನ’ ಪೇಜ್ ಪ್ರಮುಖರು ಮಾರಿಕಾಂಬಾ ದೇವಿ ಹೆಸರಿನಲ್ಲಿ ಪೂಜೆ ಮಾಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದಾರೆ. AI ತಂತ್ರಜ್ಞಾನ ಬಳಸಿ ಅತ್ಯಂತ ಭಾವನಾತ್ಮಕ ಸಂದೇಶ ಸಾರುವ ವಿಡಿಯೋ ರಚಿಸಿ ಜಾಲತಾಣದಲ್ಲಿ ಅದನ್ನು ಹರಿಬಿಟ್ಟಿದ್ದಾರೆ. ಜಾತ್ರೆಗೆ ಬರಲು ಸಾಧ್ಯವಾಗದ ಭಕ್ತರನ್ನು ಗುರಿಯಾಗಿರಿಸಿಕೊಂಡು ಅವರಿಂದ ಹಣ ವಸೂಲಿ ಮಾಡುವ ಪ್ರಯತ್ನ ಮುಂದುವರೆಸಿದ್ದಾರೆ. `ಮನೆಯಲ್ಲಿ ಕುಳಿತು ವಿಶೇಷ ಸೀರೆ ಸೇವೆ’ ಎಂಬ ನಿಟ್ಟಿನಲ್ಲಿ ಪ್ರಚಾರ ಮಾಡುತ್ತಿದ್ದು, ಅನೇಕರು ಆ ಯಜಮಾನನ ಮೋಸದ ಬಲೆಗೆ ಬಿದ್ದಿದ್ದಾರೆ.
ಈ ಆನ್‌ಲೈನ್ ವಂಚಕರು ಮಾರಿಕಾಂಬಾ ದೇವಿಗೆ ಸೀರೆ ಉಡಿ ಸಲ್ಲಿಸಲು 351ರೂ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆ ಹಣ ಪಾವತಿಸಿದ ನಂತರ ಪ್ರಸಾದ ಕಳುಹಿಸಲು ಮತ್ತೆ 199ರೂ ಹಣ ವಸೂಲಿ ಮಾಡುತ್ತಿದ್ದಾರೆ. ದೇವರ ಪ್ರಸಾದ ರೂಪದಲ್ಲಿ ಬ್ಲೌಸ್ ಪೀಸ್, ಕುಂಕುಮ ಹಾಗೂ ಹಳದಿಯನ್ನು ಮನೆಗೆ ತಲುಪಿಸುವುದಾಗಿ ವಂಚಕರು ವಿಡಿಯೋ ಮೂಲಕ ಹೇಳಿದ್ದಾರೆ. ಮಾರಿಕಾಂಬಾ ದೇವಿ ಸನ್ನಿಧಿಯ ಉಡಿ ಸೇವೆಗೆ 351ರೂ ದರ ಇಲ್ಲ. ಜೊತೆಗೆ ಪ್ರಸಾದವನ್ನು ಕೋರಿಯರ್ ಮೂಲಕ ತಲುಪಿಸುವ ವ್ಯವಸ್ಥೆಯೂ ಇಲ್ಲ. ಹೀಗಿದ್ದರೂ ದೇವಿ ಪೂಜೆ ಮಾಡುವ ವಿಡಿಯೋ ಜೊತೆ ಪ್ರಸಾದವನ್ನು ರವಾನಿಸುವುದಾಗಿ ಯಜಮಾನ.ಇನ್ ವೆಬ್‌ಸೈಟಿನವರು ಪ್ರಚಾರ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸುವ ಅರ್ಚಕರು ಸ್ಥಳೀಯರಲ್ಲ. ಸ್ಥಳೀಯ ಅರ್ಚಕರು ಅಥವಾ ದೇಗುಲ ಆಡಳಿತ ಮಂಡಳಿಯವರ ಜೊತೆ ಅವರಿಗೆ ಸಂಪರ್ಕವೂ ಇಲ್ಲ.
ಈ ಎಲ್ಲಾ ಹಿನ್ನಲೆ `ಈ ಆನ್‌ಲೈನ್ ಸೇವೆ ದೇವಸ್ಥಾನದ ಅಧಿಕೃತ ವ್ಯವಸ್ಥೆಯ ಭಾಗವಲ್ಲ’ ಎಂದು ಮಾರಿಕಾಂಬಾ ದೇಗುಲ ಆಡಳಿತ ಮಂಡಳಿಯವರು ಹೇಳಿದ್ದಾರೆ. `ಶ್ರೀ ಮಾರಿಕಾಂಬಾ ದೇವಸ್ಥಾನದ ಅಧಿಕೃತ ಆನ್‌ಲೈನ್ ಸೇವೆಗಳು ಮತ್ತು ಪಾವತಿಗಳು ದೇವಸ್ಥಾನದ ಅಧಿಕೃತ ವೆಬ್‌ಸೈಟ್ ಅಥವಾ ದೇವಸ್ಥಾನದ ನೇರ ವ್ಯವಸ್ಥೆಯ ಮೂಲಕ ಮಾತ್ರ ನಡೆಯುತ್ತವೆ. ಹೀಗಾಗಿ ಅಪರಿಚಿತ ಅಥವಾ ಖಾಸಗಿ ಖಾತೆಗೆ ಹಣ ಹಾಕಿ ವಂಚನೆಗೆ ಸಿಲುಕಬೇಡಿ’ ಎಂದು ದೇಗುಲ ಆಡಳಿತ ಮಂಡಳಿಯವರು ಹೇಳಿದ್ದಾರೆ. `ಈ ಬಗೆಯ ವಂಚನೆ ನಡೆದರೆ ತಕ್ಷಣ ಪೊಲೀಸ್ ದೂರು ಕೊಡಬೇಕು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ಜನ ಎಚ್ಚರಿಯಿಂದಿರಬೇಕು’ ಎಂದು ಶಿರಸಿಯ ವೈದ್ಯ ಡಾ ರವಿಕಿರಣ ಪಟವರ್ಧನ ಅವರು ಮನವಿ ಮಾಡಿದ್ದಾರೆ.