ಯಲ್ಲಾಪುರ ಪಟ್ಟಣದ ರವೀಂದ್ರ ನಗರ ಹಾಗೂ ವಡ್ಡರ್ ಕಾಲೋನಿಯಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಬೇಡಿಕೆಗೆ ಸ್ಪಂದಿಸದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಭಾಘದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ. ಕೆಲ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ ಎಂದವರು ಮಾಹಿತಿ ನೀಡಿದ್ದಾರೆ. ಅವರು ಈ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಆಗ್ರಹಿಸಿದ್ದಾರೆ. ಸ್ಲಾಬ್ ಕವರಿಂಗ್ ಹಾಗೂ ಗಟಾರ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ. ಅಲ್ಲದೆ ಪ್ರದೇಶದಲ್ಲಿ ಸಮರ್ಪಕ ಸ್ವಚ್ಛತೆ ನಿರ್ವಹಣೆ ಆಗುತ್ತಿಲ್ಲ ಎಂದವರು ಆರೋಪಿಸಿದ್ದಾರೆ.
ವಸತಿ ಯೋಜನೆಯಡಿ ಮಂಜೂರಾದ ಮನೆಗಳು ಪೂರ್ಣಗೊಂಡಿದ್ದರೂ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗಿಲ್ಲ. ಜಿ+2 ಮನೆಗಳನ್ನು ಇನ್ನೂ ಫಲಾನುಭವಿಗಳಿಗೆ ಹಂಚಿಕೆ ಮಾಡಿಲ್ಲ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಬೋರ್‌ವೆಲ್‌ಗಳನ್ನು ಕೊರೆದಿದ್ದರೂ ವಿದ್ಯುತ್ ಸಂಪರ್ಕ ನೀಡಿಲ್ಲ. ಅಲಂಕಾರಿಕ ದೀಪಗಳ ನಿರ್ವಹಣೆ, ವಿದ್ಯುತ್ ಕಂಬಗಳಿಗೆ ಲೈನ್ ಎಳೆದು ದೀಪ ಅಳವಡಿಸುವ ಕಾಮಗಾರಿ ಹಾಗೂ ಸಿಸಿ ಕ್ಯಾಮೆರಾಗಳ ನಿರ್ವಹಣೆ ಕೂಡ ಆಗಿಲ್ಲ ಎಂದು ಸೋಮೇಶ್ವರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಮುಂದಿನ 7 ದಿನಗಳೊಳಗೆ ಪರಿಹರಿಸಬೇಕು ಎಂದು ಆಗ್ರಹಿಸಿರುವ ಅವರು, ಇಲ್ಲವಾದಲ್ಲಿ ಸ್ಥಳೀಯರೊಂದಿಗೆ ಪಟ್ಟಣ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.