ರಕ್ತ ಪರೀಕ್ಷೆಗಾಗಿ ಅಂಕೋಲಾ ಆಸ್ಪತ್ರೆಗೆ ಹೊರಟಿದ್ದ ಲಲಿತಾ ನಾಯ್ಕ ಅವರಿಗೆ ಆಟೋ ಡಿಕ್ಕಿ ಹೊಡೆದಿದೆ. ಮಗನ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಲಲಿತಾ ನಾಯ್ಕ ಅವರು ಅಂಬಾರಕೊಡ್ಲ ತಿರುವಿನಲ್ಲಿ ಬಿದ್ದು ಸಾವನಪ್ಪಿದ್ದಾರೆ.
ಅಂಕೋಲಾ ಶಿರಕುಳಿಯ ಲಲಿತಾ ನಾಯ್ಕ (75) ಅವರು ಶನಿವಾರ ಪೇಟೆಗೆ ಬಂದಿದ್ದರು. ಅನಾರೋಗ್ಯದ ಹಿನ್ನಲೆ ಮಗನ ಜೊತೆ ಅವರು ಆಸ್ಪತ್ರೆಗೆ ಹೊರಟಿದ್ದು, ಅವರ ಬೈಕಿಗೆ ಅಂಕೋಲಾ ಶೇಡಕುಳಿಯ ಆಟೋ ಚಾಲಕ ಪರ್ವಜ್ ಹರೂಜ್ ಶೇಖ್ ಅವರು ತಮ್ಮ ರಿಕ್ಷಾ ಗುದ್ದಿದರು. ಜೈಹಿಂದ್ ಸರ್ಕಲ್ ಕಡೆಯಿಂದ ಲೈಬ್ರೆರಿ ಕ್ರಾಸಿನ ಕಡೆ ಹೊರಟಿದ್ದ ರಿಕ್ಷಾ ಬೈಕಿಗೆ ಗುದ್ದಿದ ರಭಸಕ್ಕೆ ಬೈಕಿನಲ್ಲಿದ್ದವರು ರಸ್ತೆಗೆ ಬಿದ್ದರು.
ಈ ಅಪಘಾತದಲ್ಲಿ ಬೈಕ್ ಓಡಿಸುತ್ತಿದ್ದ ರವಿ ಬೀರಪ್ಪ ನಾಯ್ಕ ಅವರಿಗೆ ಸಣ್ಣಪುಟ್ಟ ಪೆಟ್ಟಾಯಿತು. ಆದರೆ, ಅವರ ತಾಯಿ ಲಲಿತಾ ನಾಯ್ಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಜೊತೆಗೆ ಅವರು ಪ್ರಜ್ಞೆ ತಪ್ಪಿ ಬಿದ್ದರು. ಲಲಿತಾ ನಾಯ್ಕ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದಿದ್ದು, ಕಾರವಾರ ತಲುಪುವುದರೊಳಗೆ ಅವರ ಪ್ರಾಣ ಹೋಗಿತ್ತು.