ರಸ್ತೆಯಲ್ಲಿ ಸಾಗುವ ಜನರನ್ನು ಅಡ್ಡಹಾಕಿ ಅವರ ಕಣ್ಣಿಗೆ ಖಾರದಪುಡಿ ಎರಜಿ ದರೋಡೆಗೆ ಸಂಚು ರೂಪಿಸಿದ್ದ ವ್ಯಕ್ತಿಯ ವಿರುದ್ಧ ಭಟ್ಕಳ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ದಡಾಯಿತನ ಬಳಿಯಿದ್ದ ಮಂಕಿ ಕ್ಯಾಪ್, ಖಾರದಪುಡಿ, ಚಾಕು ಸೇರಿ ವಿವಿಧ ಸಲಕರಣೆಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಭಟ್ಕಳ ಹುರುಳಿಸಾಲ ನಾಗರಕಟ್ಟೆ ಹತ್ತಿರದ ಅಬ್ದುಲ್ ಸಲಾಂ ಮಹಮದ್ ಸಲೀಂ ಅವರು ಒಂಟಿಯಾಗಿ ಸಂಚರಿಸುವ ಜನರನ್ನು ಬೆದರಿಸಿ ಬೆಲೆ ಬಾಳುವ ವಸ್ತು ದೋಚುವ ಪ್ರಯತ್ನದಲ್ಲಿದ್ದರು. ಇದನ್ನು ಗಮನಿಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕ ವೆಂಕಟೇಶ ಮುರನಾಳ್ ಅವರು ಆ ಕೃತ್ಯಕ್ಕೆ ಕಡಿವಾಣ ಹಾಕಿದ್ದಾರೆ. ಭಟ್ಕಳ ರಾಜ್ಯ ಹೆದ್ದಾರಿಯ ಸಾಗರ ರಸ್ತೆಯಲ್ಲಿ ಅಬ್ದುಲ್ ಸಲಾಂ ಮಹಮದ್ ಸಲೀಂ ದರೋಡೆಗೆ ಸಂಚು ರೂಪಿಸಿದ್ದರು. ಆ ವೇಳೆಯಲ್ಲಿಯೇ ಪೊಲೀಸರು ದಾಳಿ ನಡೆಸಿ ಜನರ ಆತಂಕ ದೂರ ಮಾಡಿದ್ದಾರೆ.
ಮಾರ್ಚ 6ರ ಸಂಜೆ 6ಗಂಟೆ ವೇಳೆಗೆ ಗುಳ್ಮೆ ಕ್ರಾಸಿನ ಬಳಿ ವಾಹನವೊಂದು ಅನುಮಾನಾಸ್ಪದ ರೀತಿ ನಿಂತಿರುವುದನ್ನು ಪೊಲೀಸರು ನೋಡಿದರು. ತಪಾಸಣೆ ನಡೆಸಿದಾಗ ಅಬ್ದುಲ್ ಸಲಾಂ ಮಹಮದ್ ಸಲೀಂ ದರೋಡೆಗೆ ಸಂಚು ನಡೆಸಿರುವುದು ಗೊತ್ತಾಯಿತು. ತಕ್ಷಣ ಪೊಲೀಸರು ಅಬ್ದುಲ್ ಸಲಾಂ ಮಹಮದ್ ಸಲೀಂ ಅವರನ್ನು ವಶಕ್ಕೆಪಡೆದರು. ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು.