ಮಾದನಗೇರಿಯಿಂದ ಸುಂಕಸಾಳಕ್ಕೆ ಹೋಗುವ ರಸ್ತೆ ಬದಿ ಸಾಕಷ್ಟು ಪ್ರಮಾಣದಲ್ಲಿ ಒಣ ಮರಗಳು ಬಿದ್ದಿವೆ. ಈ ಭಾಗದ ಪ್ರಯಾಣಿಕರಿಗೆ ಅವು ಅಪಾಯಕಾರಿಯಾಗಿದ್ದರೂ, ಅರಣ್ಯ ಇಲಾಖೆ ಒಣಗಿದ ಮರ ತೆರವು ಮಾಡಲು ಆಸಕ್ತಿವಹಿಸಿಲ್ಲ.
ಮಾದನಗೇರಿಯಿಂದ ಮೇಲ್ಬಾಗದ ರಸ್ತೆ ಯಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಂದ ಶಿರಸಿ-ಯಲ್ಲಾಪುರದ ಕಡೆಯೂ ಸಾಕಷ್ಟು ಜನ ಓಡಾಡುತ್ತಾರೆ. ಈ ರಸ್ತೆಯ ಮಾಗೋಡು ಎಂಬ ಊರಿನಲ್ಲಿ ರಸ್ತೆ ಪಕ್ಕ 3-4 ಒಣಗಿದ ಮರ ಬಿದ್ದಿದೆ. ರಾತ್ರಿ ವೇಳೆ ಪ್ರಯಾಣಿಸುವವರು ಕೊಂಚ ಆಯತಪ್ಪಿದರೂ ಮರಕ್ಕೆ ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಿದೆ. ಆದರೆ, ಈ ಬಗ್ಗೆ ದೂರು ನೀಡಿದರೂ ಅರಣ್ಯ ಇಲಾಖೆ ಮರ ತೆರವು ಕಾರ್ಯಾಚರಣೆಗೆ ಆಸಕ್ತಿವಹಿಸಿಲ್ಲ.
ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಅಲ್ಲಿ ಬಿದ್ದ ಮರಗಳ ಬಗ್ಗೆ ಅಂಕೋಲಾ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ, ಅರಣ್ಯಾಧಿಕಾರಿಗಳು ಉಡಾಫೆಯಿಂದ ವರ್ತಿಸಿದ ಬಗ್ಗೆ ಅವರು ಆರೋಪಿಸಿದ್ದಾರೆ. ಅರಣ್ಯಾಧಿಕಾರಿ ದೀಪಕ ನಾಯ್ಕ ಅವರು ಉಡಾಫೆಯಿಂದ ಮಾತನಾಡಿದ ದಾಖಲೆಗಳ ಜೊತೆ ಅರಣ್ಯ ಸಚಿವರಿಗೆ ದೂರು ನೀಡುವುದಾಗಿ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹೇಳಿದ್ದಾರೆ.
`ಅಪಾಯಕಾರಿ ಮರ ತೆರವು ಮಾಡಿ ಎಂದು ಹೇಳಿದಾಗ ಈಗಾಗಲೇ ತೆರವು ಮಾಡಿದ್ದೇವೆ ಎಂದು ಅರಣ್ಯಾಧಿಕಾರಿಗಳು ಹೇಳಿದರು. ತೆರವು ಆಗದ ಬಗ್ಗೆ ಪ್ರಶ್ನಿಸಿದಾಗ ಸರಿಯಾದ ಮಾಹಿತಿ ನೀಡಲು ನಿರಾಕರಿಸಿದರು. ನಂತರ ಫೋನ್’ಗೆ ಸಹ ಸಿಗಲಿಲ್ಲ’ ಎಂದು ಅವರು ದೂರಿದ್ದಾರೆ. ಸ್ಥಳೀಯರಾದ ನಾಗೇಶ್ ನಾಯಕ ಹಾಗೂ ಸಂದೀಪ್ ನಾಯ್ಕ್ ಸಹ ಮರ ತೆರವು ಆಗದ ಸಮಸ್ಯೆ ಬಗ್ಗೆ ವಿವರಿಸಿದ್ದು, ಕ್ರಮಕ್ಕೆ ಆಗ್ರಹಿಸಿದರು.
Discussion about this post