ಗೃಹ ಸಚಿವ ಜಿ ಪರಮೇಶ್ವರ ಅವರ ಆಪ್ತರಾಗಿರುವ ಅಂಕೋಲಾದ ಗೋಪಾಲಕೃಷ್ಣ ನಾಯಕ ಅವರ ಕೊಲೆ ಪ್ರಯತ್ನ ನಡೆದಿದ್ದು, ತಕ್ಷಣ ಚಿಕಿತ್ಸೆಗೆ ದಾಖಲಾದ ಪರಿಣಾಮ ಅವರು ಜೀವಾಪಾಯದಿಂದ ಪಾರಾಗಿದ್ದಾರೆ. ತಮ್ಮ ಬೆಂಬಲಿಗನ ಮೇಲೆ ನಡೆದ ಮಾರಣಾಂತಿಕ ದಾಳಿಯನ್ನು ಗೃಹ ಸಚಿವ ಜಿ ಪರಮೇಶ್ವರ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತು ಜಿ ಪರಮೇಶ್ವರ್ ಅವರು ಮಾಧ್ಯಮದವರ ಜೊತೆ ಮಾತನಾಡಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ಕೆಪಿಸಿಸಿ ಮಾಜಿ ಕಾರ್ಯದರ್ಶಿಯಾಗಿದ್ದ ಗೋಪಾಲಕೃಷ್ಣ ನಾಯಕ ಅವರು ಬುಧವಾರ ತಮ್ಮ ಕಾರಿನಲ್ಲಿ ಅಂಕೋಲಾಗೆ ಆಗಮಿಸಿದ್ದರು. ಮೀನು ಮಾರುಕಟ್ಟೆ ಬಳಿ ಹೊಗಿದ್ದ ಅವರು ಅದಾದ ನಂತರ ಗುಡ್ ಲಕ್ ಸಲೂನ್ ಒಳಗೆ ಹೊಕ್ಕಿದ್ದರು. ಶೇವಿಂಗ್ ಮುಗಿಸಿ ಹೊರ ಬರುವಾಗ ಆರು ಜನ ಆಗಂತುಕರು ಅವರ ಮೇಲೆ ದಾಳಿ ಮಾಡಿದರು. ಅದರಲ್ಲಿ ಒಬ್ಬರು ಚಾಕು ಹಿಡಿದು ಓಡಿ ಬಂದಿದ್ದು, ಗೋಪಾಲಕೃಷ್ಣ ನಾಯಕ ಅವರ ಎದೆಗೆ ಚುಚ್ಚುವ ಪ್ರಯತ್ನ ಮಾಡಿದ್ದರು. ಈ ವೇಳೆ ಗೋಪಾಲಕೃಷ್ಣ ನಾಯಕ ಅವರು ತಮ್ಮ ಕೈಯನ್ನು ಅಡ್ಡಹಿಡಿದು ತಪ್ಪಿಸಿಕೊಂಡಿದ್ದಾರೆ. ಆಗ ಮತ್ತೊಬ್ಬರು ಗೋಪಾಲಕೃಷ್ಣ ನಾಯಕ ಅವರ ತಲೆಗೆ ಹೊಡೆದಿದ್ದಾರೆ. ಚಾಕು ಹಿಡಿದ ವ್ಯಕ್ತಿ ನೆಲಕ್ಕೆ ಬಿದ್ದಾಗ ಇನ್ನಷ್ಟು ಜನ ಆಗಮಿಸಿ ಗೋಪಾಲಕೃಷ್ಣ ನಾಯಕ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಈ ವೇಳೆ ಕಾರಿನಲ್ಲಿದ್ದ ರಾಘವೇಂದ್ರ ರಾಮದಾಸ ನಾಯಕ ಅವರು ಗೋಪಾಲಕೃಷ್ಣ ನಾಯಕ ವರ ರಕ್ಷಣೆಗೆ ಆಗಮಿಸಿದ್ದಾರೆ. ರಾಘವೇಂದ್ರ ನಾಯಕ ಅವರ ಮೇಲೆಯೂ ಆಗಂತುಕರು ಕೈ ಮಾಡಿದ್ದಾರೆ. ಈ ವೇಳೆ ಗೋಪಾಲಕೃಷ್ಣ ನಾಯಕ ಅವರು ಆ ಆಗಂತುಕರಿAದ ತಪ್ಪಿಸಿಕೊಂಡು ಶ್ರೀನಿವಾಸ ನಾಯಕ ಅವರ ಮನೆ ಕಡೆ ಓಡಿದ್ದು, ಅಲ್ಲಿಂದ ವೆಂಕಟ್ರಮಣ ದೇವಸ್ಥಾನಕ್ಕೆ ತೆರಳುವ ರಸ್ತೆಯ ಕಡೆ ಬಂದಿದ್ದಾರೆ. ಅಲ್ಲಿದ್ದ ಅಂಕೋಲಾ ಸಿಂಡಿಕೇಟ್ ಕೋ ಆಪರೇಟಿವ್ ಸೊಸೈಟಿ ಕಚೇರಿ ಒಳಗೆ ಹೋಗಿ ರಕ್ಷಣೆಪಡೆದಿದ್ದಾರೆ. ಕೂಡಲೇ ಸೊಸೈಟಿಯ ಶೆಟರ್ಸ ಮುಚ್ಚಿದ ಕಾರಣ ಆಗಂತುಕರಿಗೆ ಸೊಸೈಟಿ ಒಳಗೆ ನುಗ್ಗಲು ಸಾಧ್ಯವಾಗಿಲ್ಲ.
ಅದಾಗಿಯೂ ಈ ದಾಳಿಯಲ್ಲಿ ಗೋಪಾಲಕೃಷ್ಣ ನಾಯಕ ಅವರ ತಲೆ, ಕೈ-ಕಾಲುಗಳಿಗೆ ಗಾಯವಾಗಿದೆ. ರಕ್ತದ ಮಡುವಿನಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಸದ್ಯ ಉನ್ನತ ಮಟ್ಟದ ಚಿಕಿತ್ಸೆಗಾಗಿ ನೆರೆ ಜಿಲ್ಲೆಗೆ ಸ್ಥಳಾಂತರಿಸಲಾಗಿದೆ. ಆ ಅಪರಿಚಿತರು ಚಾಕುವಿನಿಂದ ಚುಚ್ಚಿದ ಚಿತ್ರಗಳು ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅವರು ಆಗಮಿಸಿದ ಕಾರು, ಧರಿಸಿದ ಬಟ್ಟೆ ಹಾಗೂ ವಿವಿಧ ಮಾಹಿತಿ ಆಧರಿಸಿ ಪೊಲೀಸರು ಹತ್ಯೆ ಮಾಡಲು ಬಂದವರನ್ನು ಬಂಧಿಸಿದ್ದಾರೆ.
ಗೋವಾಗೆ ಪರಾರಿಯಾಗಲು ಯತ್ನಿಸಿದ ಆಗಂತುಕರು ಮಾಜಾಳಿ ಗಡಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಆ ಆರು ಜನ ಆಗಂತುಕರು ಗೋಪಾಲಕೃಷ್ಣ ನಾಯಕ ಅವರ ಕೊಲೆಗೆ ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಂಡು ಬಂದಿದ್ದರು. ಕಟಿಂಗ್ ಸಲೂನ್ ಬಳಿ ಗೋಪಾಲಕೃಷ್ಣ ನಾಯಕ ಅವರು ಒಂಟಿಯಾಗಿ ಸಂಚರಿಸುವುದನ್ನು ಅರಿತು ಅಲ್ಲಿಯೇ ದಾಳಿ ಮಾದ ವಿಷಯ ಬಹಿರಂಗವಾಗಿದೆ.
ತಮ್ಮ ಆಪ್ತರ ಮೇಲೆ ನಡೆದ ದಾಳಿಯ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ ಅವರು ಮಾಹಿತಿಪಡೆದಿದ್ದಾರೆ. ಜೊತೆಗೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. `ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಗೋಪಾಲಕೃಷ್ಣ ನಾಯಕ ಅವರು ಕಳೆದ ವಿಧಾನಸಭೆಗೆ ಟಿಕೆಟ್ ಕೇಳಿದ್ದರು. ಇದಕಿದ್ದ ಹಾಗೇ ಅವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದವರು ಯಾರು? ಎಂದು ಗೊತ್ತಾಗಿಲ್ಲ. ಪ್ರಕರಣದಲ್ಲಿ ನಾಲ್ಕು ಜನರನ್ನು ಬಂಧಿಸಿದ್ದು, ವಿಚಾರಣೆ ಮುಂದುವರೆದಿದೆ. ಗೋಪಾಲಕೃಷ್ಣ ನಾಯಕ ಅವರು ಸುರಕ್ಷಿತವಾಗಿದ್ದಾರೆ’ ಎಂದು ಜಿ ಪರಮೇಶ್ವರ್ ಅವರು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.