ಗುರುವಾರ ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಏಳು ಕಾಲೇಜಿನ ವಿದ್ಯಾರ್ಥಿಗಳು ಮೊದಲ ಮೂರು ಸ್ಥಾನವನ್ನು ಹಂಚಿಕೊoಡಿದ್ದಾರೆ. ಅದರಲ್ಲಿಯೂ ಶಿರಸಿ ಹಾಗೂ ಭಟ್ಕಳದ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶದ ಮೂಲಕ ತಮ್ಮ ಸಾಧನೆ ಪ್ರದರ್ಶಿಸಿದ್ದಾರೆ.
ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಮೊದಲ ಮೂರು ಸ್ಥಾನಪಡೆದವರ ಕಾಲೇಜು ಪರಿಶೀಲಿಸಿದಾಗ ಶಿರಸಿಯ ಎಂಇಎಸ್ ಪಿಯು ಕಾಲೇಜಿನ ವಿದ್ಯಾರ್ಥಿಯೊಬ್ಬರು ವಿಜ್ಞಾನ ವಿಭಾಗದಲ್ಲಿ ಮೊದಲಿಗರಾಗಿದ್ದಾರೆ. ಇದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನಪಡೆದಿದ್ದಾರೆ. ಭಟ್ಕಳದ ಅಂಜುಮಾನ್ ಪಿಯು ಕಾಲೇಜಿನ ವಿದ್ಯಾರ್ಥಿಯೊಬ್ಬರು ಕಲಾ ವಿಭಾಗದಲ್ಲಿ ಮೊದಲ ಸ್ಥಾನಪಡೆದಿದ್ದು, ಇದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನಪಡೆದಿದ್ದಾರೆ. ಇದರೊಂದಿಗೆ ಸಿದ್ದಾಪುರದ ಚೇತನಾ ಪಿಯು ಕಾಲೇಜು, ಭಟ್ಕಳದ ನ್ಯೂ ಇಂಗ್ಲಿಷ್ ಪಿಯು ಕಾಲೇಜು, ಸಿದ್ದಾಪುರದ ಚೇತನಾ ಪಿಯು ಕಾಲೇಜು, ಹೊನ್ನಾವರದ ಎಸ್‌ಡಿಎಂ ಪಿಯು ಕಾಲೇಜು, ಕಾರವಾರ ಸರ್ಕಾರಿ ಪಿಯು ಕಾಲೇಜು ಹಾಗೂ ಕುಮಟಾ ಹಿರೇಗುತ್ತಿಯ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮಹತ್ವದ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಅಂಜುಮಾನ್ ಪಿಯು ಕಾಲೇಜಿನ ಶಫಾ ಆನಂ 591ರ ಅಂಕಗಳಿಸಿ ಶೇ 98.50ರ ಸಾಧನೆ ಮಾಡಿದ್ದಾರೆ. ಕುಮಟಾ ಹಿರೇಗುತ್ತಿಯ ಸರ್ಕಾರಿ ಕಾಲೇಜಿನ ಜಾಹ್ನವಿ ಮಾಸ್ತಿ ಗೌಡ ಅವರು 587ರ ಅಂಕಗಳಿಸಿ ಶೇ 96.83ರ ಸಾಧನೆ ಮಾಡಿದ್ದಾರೆ. ಕಾರವಾರ ಸರ್ಕಾರಿ ಪಿಯು ಕಾಲೇಜಿನ ಸತೀಶ ವಿನೋದ ನಾಯ್ಕ ಅವರು 585 ಅಂಕಗಳಿಸಿ ಶೇ 97.5ರ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಹೊನ್ನಾವರ ಎಸ್‌ಡಿಎಂ ಪಿಯು ಕಾಲೇಜಿನ ಚಿನ್ಮಯಿ ಮಂಜುನಾಥ ಶೆಟ್ಟಿ ಅವರು 596 ಅಂಕಗಳಿಸಿ ಶೇ 99.33ರ ಸಾಧನೆ ಮಾಡಿದ್ದಾರೆ. ಶಿರಸಿ ಎಂಇಎಸ್ ಪಿಯು ಕಾಲೇಜಿನ ಪ್ರವೀಣ ಭಟ್ಟ ಅವರು 594 ಅಂಕಗಳಿಸಿ ಶೇ 99ರ ಸಾಧನೆ ಮಾಡಿದ್ದಾರೆ. ಭಟ್ಕಳದ ದ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಸಂಜನಾ ನಾಗಪ್ಪ ನಾಯ್ಕ ಅವರು 593 ಅಂಕಗಳಿಸಿ ಶೇ 98.83ರ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶಿರಸಿ ಎಂಇಎಸ್ ಕಾಲೇಜಿನ ಚೈತನ್ಯ ಜಿ ಹೆಗಡೆ ಅವರು 595ರ ಅಂಕಗಳಿಸಿ ಶೇ 99.16ರ ಸಾಧನೆ ಮಾಡಿದ್ದಾರೆ. ಭಟ್ಕಳ ಅಂಜುಮಾನ್ ಪಿಯು ಕಾಲೇಜಿನ ಮೈಮುನಾ ಆಜಾಬ್ ಅವರು 594 ಅಂಕಗಳಿಸಿ ಶೇ 99ರ ಸಾಧನೆ ಮಾಡಿದ್ದಾರೆ. ಸಿದ್ದಾಪುರದ ಚೇತನಾ ಪಿಯು ಕಾಲೇಜಿನ ರಾಘು ಶರಶ್ಚಂದ್ರ ಹೆಗಡೆ ಅವರು 593 ಅಂಕಗಳಿಸಿ ಶೇ 98ರ ಸಾಧನೆ ಮಾಡಿದ್ದಾರೆ. ರಾಜ್ಯದ ಪಿಯುಸಿ ಫಲಿತಾಂಶದಲ್ಲಿ ಉತ್ತರ ಕನ್ನಡ ಜಿಲ್ಲೆ ಕಳೆದ ಬಾರಿ ನಾಲ್ಕನೇ ಸ್ಥಾನಕ್ಕಿದ್ದು, ಈ ಬಾರಿ 5ನೇ ಸ್ಥಾನಕ್ಕೆ ಏರಿಕೆ ಕಂಡಿದೆ.