ಹಣಕಾಸು ಅವ್ಯವಹಾರ ನಡೆಸಿ ಪರಾರಿಯಾಗಿದ್ದ ಅಂಕೋಲಾದ ಆರೋಪಿ ವಿಕ್ರಮ ಪಂತಾ ಅವರನ್ನು ಕಾರವಾರ ಪೊಲೀಸ್ ಸಿಬ್ಬಂದಿ ಗುರು ನಾಯಕ್ ಅವರು ಹಿಡಿದಿದ್ದಾರೆ. ನಾಲ್ಕು ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ ವಿಕ್ರಮ ಪಂತಾ ಅವರು ಗುರು ನಾಯಕ್ ಅವರ ಕಣ್ಣಿಗೆ ಬಿದ್ದಿದ್ದರಿಂದ ಜೈಲು ಪಾಲಾಗಿದ್ದಾರೆ.
2022ರಲ್ಲಿ ಕಾರವಾರದಲ್ಲಿ ನಡೆದ ಅಪರಾತಪರದಲ್ಲಿ ಅಂಕೋಲಾ ಅಲಗೇರಿಯ ವಿಕ್ರಮ ಎನ್ ಪಂತ ಅವರು ಮುಖ್ಯ ಆರೋಪಿಯಾಗಿದ್ದರು. ಆರ್ಥಿಕ ಅವ್ಯವಹಾರದಲ್ಲಿ ಭಾಗಿಯಾಗಿದ್ದ ವಿಕ್ರಮ ಪಂತ ಅವರು ನ್ಯಾಯಾಲಯಕ್ಕೆ ಹಾಜರಾಗದೇ ತಪ್ಪಿಸಿಕೊಂಡಿದ್ದರು. ಸಾಕಷ್ಟು ಕಡೆ ಪೊಲೀಸರು ಹುಡುಕಿದರೂ ಸಹ ವಿಕ್ರಮ ಪಂತಾ ಅವರು ಸಿಕ್ಕಿರಲಿಲ್ಲ. ಈ ಹಿನ್ನಲೆ ನ್ಯಾಯಾಲಯ ವಿಕ್ರಮ ಪಂತಾ ಪತ್ತೆಗೆ ವಾರೆಂಟ್ ಜಾರಿ ಮಾಡಿತ್ತು.
ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ವಿಕ್ರಮ ಪಂತಾ ಅವರ ಬಂಧನಕ್ಕೆ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿದರು. ಏಪ್ರಿಲ್ 8ರಂದು ವಿಕ್ರಮ ಪಂತಾ ಅವರ ಅಡಗು ತಾಣವನ್ನು ಕಾರವಾರ ಶಹರ ಠಾಣೆ ಪೊಲೀಸರು ಪತ್ತೆ ಮಾಡಿದರು. ಆ ಠಾಣೆಯ ಪೊಲೀಸ್ ಸಿಬ್ಬಂದಿ ಗುರು ನಾಯಕ ಅವರು ತಮ್ಮ ಚಾಣಾಕ್ಷತನದಿಂದ ಆರೋಪಿ ಬಂಧಿಸಲು ಬಲೆ ಬೀಸಿದರು. ಯಾರ ಕೈಗೂ ಸಿಗದೇ ಪರಾರಿಯಾಗುತ್ತಿದ್ದ ವಿಕ್ರಮ ಪಂತಾ ಈ ದಿನ ಪೊಲೀಸರ ಬಲೆಗೆ ಬಿದ್ದರು. ಕೂಡಲೇ ಪೊಲೀಸರು ಆರೋಪಿ ವಿಕ್ರಮ ಪಂತಾ ಅವರನ್ನು ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದರು.