ಹೊಸಪೇಟೆಯಿಂದ ಗೋವಾಗೆ ಅದಿರು ಸಾಗಿಸುತ್ತಿದ್ದ ಲಾರಿ ದಾಂಡೇಲಿ ಬಳಿಯ ಆನಮೋಡದಲ್ಲಿ ಅಪಘಾತಕ್ಕೀಡಾಗಿದೆ. ಅರಣ್ಯ ಇಲಾಖೆ ತಪಾಸಣಾ ಕೇoದ್ರದ ಬಳಿಯೇ 16 ಚಕ್ರದ ಲಾರಿ ಚರಂಡಿಗೆ ಬಿದ್ದಿದೆ.
ಶುಕ್ರವಾರ ಗೋವಾ – ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಆನಮೋಡ್ ಮೂಲಕ ಲಾರಿ ಸಂಚರಿಸುತ್ತಿತ್ತು. ಆ ಲಾರಿ ತುಂಬ ಮ್ಯಾಂಗನೀಸ್ ಅದಿರು ತುಂಬಿದ್ದು, ಚೆಕ್ ಪೋಸ್ಟಿನಲ್ಲಿ ಲಾರಿಯ ತಪಾಸಣೆ ನಡೆಯಿತು. ಅದಾದ ನಂತರ ಲಾರಿಯ ಕಾಗದಪತ್ರಗಳಿಗೆ ಅರಣ್ಯ ಇಲಾಖೆ ಮೊಹರು ಹಾಕಿಸುವ ಪದ್ಧತಿಯಿದ್ದು, ಲಾರಿ ಚಾಲಕ ಆ ಪ್ರಕ್ರಿಯೆಗಾಗಿ ತಪಾಸಣಾ ಕೇಂದ್ರದ ಬಳಿ ಹೋಗಿದ್ದರು. ಈ ವೇಳೆ ಆ ಲಾರಿ ಏಕಾಏಕಿ ಹಿಂದೆ ಚಲಿಸಿ ಗಟಾರಕ್ಕೆ ಬಿದ್ದಿತು.
ಈ ಅರ್ವಡದಲ್ಲಿ ತಪಾಸಣಾ ಕೇಂದ್ರದ ಗೇಟ್, ಫಾಸ್ಟ್ಟ್ಯಾಗ್ ಯಂತ್ರ, ಸೋಲಾರ್ ಲೈಟ್ ಹಾಗೂ ಸಿಸಿ ಟಿವಿ ಕ್ಯಾಮೆರಾಗಳಿಗೆ ಹಾನಿಯಾಗಿದೆ. ಲಾರಿ ಹಿಂದೆ ಚಲಿಸುವುದನ್ನು ನೋಡಿದ ತಪಾಸಣಾ ಸಿಬ್ಬಂದಿ ತಕ್ಷಣ ಅಲ್ಲಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಅದಾದ ನಂತರ ಲಾರಿ ಗಟಾರಕ್ಕೆ ಸಿಲುಕಿದ್ದು, ಚಾಲಕನ ಜೊತೆ ಅಲ್ಲಿದ್ದ ಸಿಬ್ಬಂದಿ ಪ್ರಯತ್ನಿಸಿದರೂ ಮೇಲೇರಿಸಲು ಸಾಧ್ಯವಾಗಲಿಲ್ಲ. ನಂತರ ಕ್ರೇನ್ ಮೂಲಕ ಲಾರಿ ಮೇಲೆತ್ತುವ ಪ್ರಕ್ರಿಯೆ ನಡೆದಿದೆ.