ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಯಲ್ಲಾಪುರದ ಬಿಜೆಪಿ ಕಾರ್ಯಕರ್ತ ರಜತ್ ಬದ್ದಿ ಅವರು ಪೊಲೀಸ್ ದೂರು ನೀಡಿದ್ದಾರೆ. ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರ ಜೊತೆ ಇನ್ನೂ ಅನೇಕರು ಖರ್ಗೆ ವಿರುದ್ಧ ಕಠಿಣ ಕ್ರಮಕ್ಕಾಗಿ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ.
`ಮಲ್ಲಿಕಾರ್ಜುನ ಖರ್ಗೆ ಅವರು ಧಾರ್ಮಿಕ ಭಾವನೆಗೆ ಅಡ್ಡಿ ತರುವ ರೀತಿ ಭಾಷಣ ಮಾಡಿದ್ದಾರೆ’ ಎಂಬುದು ದೂರಿನ ಸಾರಾಂಶ. ಜೊತೆಗೆ `ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಪ್ರಚೋದನಕಾರಿ ಮಾತನಾಡಿದ್ದಾರೆ. ಅಲ್ಪ ಸಂಖ್ಯಾತರ ಓಲೈಕೆಗಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರ ಜೀವಕ್ಕೆ ಅಪಾಯ ತರುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದಾರೆ’ ಎಂದವರು ದೂರಿದ್ದಾರೆ.
`ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದಿಂದ ಹಿಂಸಾಚಾರವಾಗುವ ಸಾಧ್ಯತೆಯಿದೆ. ಈ ಹಿನ್ನಲೆ ಕೂಡಲೇ ಅವರನ್ನು ಬಂಧಿಸಬೇಕು’ ಎಂದವರು ಆಗ್ರಹಿಸಿದ್ದಾರೆ. ವಿನೋದ ತಳ್ಳೇಕರ್, ನಾಗಾರ್ಜುನ ಬದ್ಧಿ, ವಿಠ್ಠು ಶಳಕೆ ಇನ್ನಿತರರು ಪತ್ರಕ್ಕೆ ಸಹಿ ಹಾಕಿದ್ದು, ಬಿಜೆಪಿಯ ಅನೇಕರು ಸೇರಿ ಈ ದೂರನ್ನು ಪೊಲೀಸರಿಗೆ ನೀಡಿದ್ದಾರೆ.