ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರ ಪುತ್ರ ಅಶುತೋಷ್ ಹೆಗಡೆ ಅವರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವರ ವಿರುದ್ಧ ದಾಖಲಾದ ಹೊಡೆದಾಟ ಪ್ರಕರಣ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಿದೆ. ಹೊಡೆದಾಟ ಪ್ರಕರಣದಲ್ಲಿ ಅಶುತೋಷ್ ಹೆಗಡೆ ಅವರು ಆರೋಪಿಯಾಗಿರುವುದರಿಂದ ಅವರಿಗೆ ಪಾರ್ಸಪೋರ್ಟ ಸಮಸ್ಯೆ ಎದುರಾಗಿದೆ.
2025ರ ಜೂನ್ ಅವಧಿಯಲ್ಲಿ ತುಮಕೂರಿನ ಬಳಿ ಸೈಫ್ ಖಾನ್ ಎಂಬಾತರು ಅನಂತಕುಮಾರ ಹೆಗಡೆ ಅವರ ಕಾರು ಹಿಂದಿಕ್ಕಿದ್ದರು. ಆ ವೇಳೆ ಗಲಾಟೆ ನಡೆದಿದ್ದು, ಅನಂತಕುಮಾರ ಹೆಗಡೆ ಅವರ ಗನ್ ಮ್ಯಾನ್ ಪಿಸ್ತೂಲು ತೋರಿಸಿ ಹೆದರಿಸಿದ್ದರು. ಈ ವೇಳೆ ಅನಂತಕುಮಾರ ಹೆಗಡೆ ಅವರ ಪುತ್ರ ಅಶುತೋಷ್ ಹೆಗಡೆ ಅವರು ಸಹ ಅದೇ ಕಾರಿನಲ್ಲಿದ್ದು, ಕಾರಿನಿಂದ ಇಳಿದು ಗಲಾಟೆ ಮಾಡಿದ್ದರು. ಅದಾದ ನಂತರ ಸೈಫ್ ಖಾನ್ ಅವರು `ಅನಂತಕುಮಾರ ಹೆಗಡೆ ಅವರ ಕಾರಿನಲ್ಲಿದ್ದವರು ನಮ್ಮ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಅವರ ಮೂರು ಹಲ್ಲು ಮುರಿದಿದೆ. ಅನಂತಕುಮಾರ್ ಹೆಗಡೆ ಅವರು ನಮ್ಮ ತಾಯಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಅವರ ಭದ್ರತಾ ಸಿಬ್ಬಂದಿ ಪಿಸ್ತೂಲ್ ತೋರಿಸಿ ಜೀವ ಬೆದರಿಸಿದ್ದಾರೆ’ ಎಂದು ದೂರಿದ್ದರು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.
ಈ ವಿಷಯದಲ್ಲಿ ಅನಂತಕುಮಾರ ಹೆಗಡೆ ಅವರ ಪುತ್ರ ಅಶುತೋಷ್ ಹೆಗಡೆ ಅವರು ಸಹ ಆರೋಪಿಯಾಗಿದ್ದು, ಅದೇ ಅವರ ಶಿಕ್ಷಣಕ್ಕೆ ಸಮಸ್ಯೆಯಾಯಿತು. ಹೊಡೆದಾಟ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವಿದೇಶದಲ್ಲಿ ವ್ಯಾಸಂಗ ಮಾಡುವ ಅಶುತೋಷ್ ಹೆಗಡೆ ಅವರಿಗೆ ಪಾಸ್‌ಪೋರ್ಟ ಸಮಸ್ಯೆ ಕಾಡಿತು. ಈ ಹಿನ್ನಲೆ `ಮಗನ ಮೇಲಿನ ಪ್ರಕರಣವನ್ನು ಕೈ ಬಿಡಬೇಕು’ ಎಂದು ಅನಂತಕುಮಾರ ಹೆಗಡೆ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ಸರ್ಕಾರಿ ಅಭಿಯೋಜಕರು ಇದಕ್ಕೆ ತಕರಾರು ಸಲ್ಲಿಸಿದರು. `ಅನಂತಕುಮಾರ್ ಅವರ ಪುತ್ರ ಅಶುತೋಷ್ ಹೆಗಡೆ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಈ ಗಲಾಟೆ ಪ್ರಕರಣದಿಂದಾಗಿ ಅವರಿಗೆ ಪಾಸ್‌ಪೋರ್ಟ್ ಪಡೆಯಲು ಸಮಸ್ಯೆಯಾಗುತ್ತಿದೆ. ಆದ್ದರಿಂದ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಬೇಕು’ ಎಂದು ಅನಂತಕುಮಾರ ಹೆಗಡೆ ಪರ ವಕೀಲರು ಹೈಕೋರ್ಟಿಗೆ ಮನವಿ ಮಾಡಿದರು. `ಹೊಡೆದಾಟ ಪ್ರಕರಣದಲ್ಲಿ ಅಶುತೋಷ್ ಹೆಗಡೆ ಅವರು ಭಾಗಿಯಾಗಿದ್ದಾರೆ. ಈ ಬಗ್ಗೆ ವಿಡಿಯೋಗಳಿವೆ’ ಎಂದು ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದರು.
ಈ ವಾದ ಆಲಿಸಿದ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರು ಅಶುತೋಷ್ ಹೆಗಡೆ ಅವರ ಹೆಸರನ್ನು ಪ್ರಕರಣದಿಂದ ಕೈಬಿಡುವ ಕುರಿತಾದ ಮನವಿಯನ್ನು ಏಪ್ರಿಲ್ 16ರಂದು ವಿಚಾರಣೆ ನಡೆಸಲು ನಿರ್ಧರಿಸಿತು.