ರಾಯಲ್ ಚಾಲೆಂಜರ್ಸ ಬೆಂಗಳೂರು ಹಾಗೂ ರಾಜಸ್ಥಾನ ರಾಯರ್ಲ್ಸ ನಡುವೆ ನಡೆದ ಐಪಿಎಲ್-ಟಿ 20 ಪಂದ್ಯಾವಳಿ ವೇಳೆ ಬೆಟ್ಟಿಂಗ್ ಕಟ್ಟಿದ್ದ ನಾಲ್ವರ ವಿರುದ್ಧ ದಾಂಡೇಲಿ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಜೂಜಾಟಗಾರರ ಬಳಿಯಿದ್ದ ಐಫೋನ್’ನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ದಾಂಡೇಲಿ ನಿರ್ಮಲನಗರದ ಬಾರಿನಲ್ಲಿ ದುಡಿಯುವ ಅನೀಲ ಲಕ್ಷö್ಮಣ ಬಳ್ಳಾರಿ, ರೆಸಾರ್ಟಿನಲ್ಲಿ ಕೆಲಸ ಮಾಡುವ ಟಿ ಆರ್ ಟಿ ಕ್ರಾಸಿನ ಬಾಲರಾಜ ನಾಗೇಶ ಗಿರಿಯಾಲ್ ಅವರು ದಾಂಡೇಲಿಯ ಶ್ರವಣ ಎಂಬಾತರ ಜೊತೆ ಬೆಟ್ಟಿಂಗ್ ಕಟ್ಟಿದ್ದರು. ದಾಂಡೇಲಿ ಬಾಂಬೆಚಾಳದಲ್ಲಿ ಪೆಂಡಾಲ್ ಹಾಕುವ ಕೆಲಸ ಮಾಡುವ ಇಮ್ಯಾನುವೆಲ್ ಸ್ವಾಮಿಲ್ ಬೈಲಾ ಹಾಗೂ ಸುಭಾಸನಗರದ ಕೂಲಿ ಕಾರ್ಮಿಕ ಬಸವರಾಜ್ ನಾಗೇಶ ಗಿರಿಯಾಲ ಸಹ ಶ್ರವಣ ಅವರ ಜೊತೆ ಬೆಟ್ಟಿಂಗ್ ಕಟ್ಟಿದ್ದರು.
ಏಪ್ರಿಲ್ 10ರ ರಾತ್ರಿ ದಾಂಡೇಲಿ ಅಂಬೆವಾಡಿ ಸರ್ಕಾರಿ ಕಾಲೇಜಿನ ಹತ್ತಿರ ಪಿಸೈ ಅಮೀನಸಾಬ್ ಅತ್ತಾರ್ ಅವರು ದಾಳಿ ನಡೆಸಿದಾಗ ಅನೀಲಬಳ್ಳಾರಿ ಹಾಗೂ ಬಾಲರಾಜ ಗಿರಿಯಾಲ್ ಅವರು ಸಿಕ್ಕಿಬಿದ್ದರು. ಅವರ ಬಳಿಯಿದ್ದ 2500ರೂ ಹಣ ಹಾಗೂ ಐಫೋನ್’ನ್ನು ಪೊಲೀಸರು ವಶಕ್ಕೆಪಡೆದರು. ಈ ವೇಳೆ ಫೋನ್ ಮೂಲಕವೇ ಅವರಿಬ್ಬರು ದಾಂಡೇಲಿಯ ಶ್ರವಣ್ ಎಂಬಾತರ ಬಳಿ ಬೆಟ್ಟಿಂಗ್ ಕಟ್ಟಿರುವುದು ಗೊತ್ತಾಯಿತು. ಪಿಸೈ ಕಿರಣ ಪಾಟೀಲ್ ಅವರು ಅದೇ ದಿನ ಅಂಬೇವಾಡಿ ಬಳಿ ದಾಳಿ ನಡೆಸಿದಾಗ ಅಲ್ಲಿ ಮ್ಯಾನುವೆಲ್ ಸ್ವಾಮಿಲ್ ಬೈಲಾ ಹಾಗೂ ಬಸವರಾಜ್ ಗಿರಿಯಾಲ ಅವರು ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದರು. ಅವರ ಬಳಿಯಿದ್ದ ಐಫೋನನ್ನು ಪೊಲೀಸರು ಜಪ್ತು ಮಾಡಿದ್ದು, ಜೂಜಾಟಕ್ಕೆ ಬಳಸಿದ್ದ 3 ಸಾವಿರ ರೂ ಹಣವನ್ನು ವಶಕ್ಕೆಪಡೆದರು. ಅವರಿಬ್ಬರು ಸಹ ದಾಂಡೇಲಿಯ ಶ್ರವಣ ಎಂಬಾತರ ಜೊತೆ ಬೆಟ್ಟಿಂಗ್ ಕಟ್ಟಿರುವುದು ಗೊತ್ತಾಯಿತು. ಈ ಹಿನ್ನಲೆ ಅವರೆಲ್ಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.